S Shorts

ಪೂಜೆ ನೆಪದಲ್ಲಿ ವೃದ್ಧೆಗೆ ವಂಚನೆ, 40 ಲಕ್ಷ ರೂ. ಮೌಲ್ಯದ ಚಿನ್ನ ದೋಚಿ AI ವಿಡಿಯೋ ಮೂಲಕ ನಾಟಕವಾಡಿದ ನಕಲಿ ಜ್ಯೋತಿಷಿ!

ಪೂಜೆ ನೆಪದಲ್ಲಿ ವೃದ್ಧೆಗೆ ವಂಚನೆ, 40 ಲಕ್ಷ ರೂ. ಮೌಲ್ಯದ ಚಿನ್ನ ದೋಚಿ AI ವಿಡಿಯೋ ಮೂಲಕ ನಾಟಕವಾಡಿದ ನಕಲಿ ಜ್ಯೋತಿಷಿ!
Author: Sagaradventure
Posted By: Sagaradventure
Updated: Sep 17, 2026 | 12:18 PM

ಬೆಂಗಳೂರಿನಲ್ಲಿ ಪೂಜೆ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರನ್ನು ನಂಬಿಸಿ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ 329 ಗ್ರಾಂ ಚಿನ್ನಾಭರಣ ದೋಚಿದ ನಕಲಿ ಜ್ಯೋತಿಷಿಯ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರಿನಗರ ನಿವಾಸಿ ಶಾಂತಮ್ಮ ಎಂಬುವವರೇ ವಂಚನೆಗೊಳಗಾದ ವೃದ್ಧೆ. ಆರೋಪಿ ವೆಂಕಟೇಶ್ ಎಂಬಾತ ನಂಬಿಕೆ ದ್ರೋಹ ಎಸಗಿದ್ದಲ್ಲದೆ, ಒಡವೆಗಳನ್ನು ಮರಳಿ ಕೇಳಿದಾಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ತನ್ನದೇ ಅಪಘಾತದ ನಕಲಿ ವಿಡಿಯೋ ಸೃಷ್ಟಿಸಿ ವೃದ್ಧೆಯನ್ನು ಯಾಮಾರಿಸಲು ಯತ್ನಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯಲು ಶಾಂತಮ್ಮ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಹೋಗುತ್ತಿದ್ದಾಗ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳುತ್ತಿದ್ದ ಜ್ಯೋತಿಷಿ ವೆಂಕಟೇಶ್‌ ಪರಿಚಯವಾಗಿತ್ತು. ಈ ವೇಳೆ ವೃದ್ಧೆ ತಮ್ಮ ಅನಾರೋಗ್ಯದ ಸಮಸ್ಯೆಗಳನ್ನು ಆತನ ಬಳಿ ಹೇಳಿಕೊಂಡಿದ್ದರು. ಕಾಕತಾಳೀಯ ಎಂಬಂತೆ, ಆತ ಭರವಸೆ ನೀಡಿದ ಬಳಿಕ ಶಾಂತಮ್ಮ ಅವರ ಆರೋಗ್ಯ ಸುಧಾರಿಸಿತ್ತು. 

ಇದರಿಂದ ಆತನ ಮೇಲೆ ಅಪಾರ ನಂಬಿಕೆ ಬೆಳೆಸಿಕೊಂಡ ವೃದ್ಧೆ, ಕೆಲ ತಿಂಗಳ ಬಳಿಕ ಮಗನ ಮದ್ಯಪಾನ ಚಟ ಬಿಡಿಸಲು ಹಾಗೂ ಮಗಳ ಮದುವೆಯ ವಿಚಾರ ಕೇಳಲು ಮತ್ತೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಹೋಗಿದ್ದರು. ಆ ದಿನ ಆತ ಅಲ್ಲಿ ಇಲ್ಲದ ಕಾರಣ, ಪಕ್ಕದ ಆಟೋ ಸ್ಟ್ಯಾಂಡ್‌ನಲ್ಲಿದ್ದ ಚಾಲಕರೊಬ್ಬರಿಗೆ ತಮ್ಮ ಮೊಬೈಲ್ ನಂಬರ್ ನೀಡಿ, ಜ್ಯೋತಿಷಿ ಬಂದಾಗ ಕರೆ ಮಾಡುವಂತೆ ತಿಳಿಸಿ ಬಂದಿದ್ದರು.

ಇದಾದ ಕೆಲ ದಿನಗಳ ಬಳಿಕ ವೃದ್ಧೆಗೆ ಕರೆ ಮಾಡಿದ ವೆಂಕಟೇಶ್, ಅವರ ಮನೆ ವಿಳಾಸ ಪಡೆದುಕೊಂಡಿದ್ದ. ತರುವಾಯ ಹುಣ್ಣಿಮೆ ಹಾಗೂ ಅಮಾವಾಸ್ಯೆ ದಿನಗಳಂದು ಮನೆಗೆ ಭೇಟಿ ನೀಡಿ, ಪೂಜೆ ಮಾಡುವ ನೆಪದಲ್ಲಿ ಹಂತ-ಹಂತವಾಗಿ 329 ಗ್ರಾಂ ಚಿನ್ನಾಭರಣವನ್ನು ಪಡೆದುಕೊಂಡಿದ್ದ. ಕಳೆದ ತಿಂಗಳು ಶಾಂತಮ್ಮ ಅವರು ಒಡವೆಗಳನ್ನು ಮರಳಿಸುವಂತೆ ಪಟ್ಟು ಹಿಡಿದಾಗ ಆತ ಸಬೂಬು ಹೇಳಿ ತಪ್ಪಿಸಿಕೊಳ್ಳಲಾರಂಭಿಸಿದ. ಅಂತಿಮವಾಗಿ ಆತ ಎಐ ಮೂಲಕ ತನಗೆ ಭೀಕರ ಅಪಘಾತವಾಗಿರುವಂತಹ ನಕಲಿ ವಿಡಿಯೋವೊಂದನ್ನು ಸೃಷ್ಟಿಸಿ ವೃದ್ಧೆಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ. 

ಅಲ್ಲದೆ, ಅಪರಿಚಿತ ವ್ಯಕ್ತಿಯೊಬ್ಬನ ಮೂಲಕ ಕರೆ ಮಾಡಿಸಿ, ವೆಂಕಟೇಶ್ ಬದುಕುವುದು ಕಷ್ಟವಿದೆ ಎಂದು ಸುಳ್ಳು ಹೇಳಿಸಿದ್ದ. ಗಾಬರಿಗೊಂಡ ಶಾಂತಮ್ಮ ಅವರು ಈ ವಿಚಾರವನ್ನು ತಮ್ಮ ಮಕ್ಕಳಿಗೆ ತಿಳಿಸಿ ವಿಡಿಯೋ ತೋರಿಸಿದಾಗ, ಅದು ಎಐ ನಿರ್ಮಿತ ನಕಲಿ ವಿಡಿಯೋ ಎಂಬುದು ಮಗಳಿಗೆ ಅರಿವಾಗಿದೆ. ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆ ವೃದ್ಧೆ ತಕ್ಷಣವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.