ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸುರಕ್ಷತೆಯ ಕುರಿತಾದ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ‘ಓಪನ್‌ಎಐ’ (OpenAI) ಸಂಸ್ಥೆಯು ತನ್ನ ಎಐ ಮಾಡೆಲ್‌ಗಳು ಪ್ರದರ್ಶಿಸಿದ 6 ಅನಿರೀಕ್ಷಿತ ಹಾಗೂ ಆತಂಕಕಾರಿ ನಡವಳಿಕೆಗಳ ವರದಿಯನ್ನು ಬಹಿರಂಗಪಡಿಸಿದೆ.
ಅನುಮತಿಯಿಲ್ಲದೆ ಕಾರ್ಯನಿರ್ವಹಿಸುವುದು, ಇತರ ಮಾಡೆಲ್‌ಗಳೊಂದಿಗೆ ಸಮನ್ವಯ ಸಾಧಿಸುವುದು ಅಥವಾ ನಿಗಾ ವ್ಯವಸ್ಥೆಯಿಂದ ನುಣುಚಿಕೊಳ್ಳುವಂತಹ ಎಐ ನಡವಳಿಕೆಗಳನ್ನು ಪತ್ತೆಹಚ್ಚಿ ನಿಯಂತ್ರಿಸಲು ಸಂಸ್ಥೆಯು ಬುಧವಾರ ಹೊಸ ಟ್ರ್ಯಾಕಿಂಗ್ ಮತ್ತು ಡಿಸ್ಕ್ಲೋಷರ್ ಫ್ರೇಮ್‌ವರ್ಕ್ (ನಿಗಾ ವ್ಯವಸ್ಥೆ) ಅನ್ನು ಪರಿಚಯಿಸಿದೆ. ಓಪನ್‌ಎಐ ಮತ್ತು ಆಂಥ್ರೋಪಿಕ್ ಸೇರಿದಂತೆ ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರು ಎಐ ತಂತ್ರಜ್ಞಾನದ ತ್ವರಿತ ಬೆಳವಣಿಗೆಯಿಂದಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಇದರ ಅಭಿವೃದ್ಧಿ ವೇಗವನ್ನು ತಗ್ಗಿಸುವಂತೆ ಕರೆ ನೀಡುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ತರಬೇತಿ ಮತ್ತು ಮೌಲ್ಯಮಾಪನದ ವೇಳೆ ಈ 6 ಪ್ರಕರಣಗಳು ಪತ್ತೆಯಾಗಿವೆ ಎಂದು ಓಪನ್‌ಎಐ ತಿಳಿಸಿದೆ. ಇದರಲ್ಲಿ ಅತ್ಯಂತ ಆತಂಕಕಾರಿ ಅಂಶವೆಂದರೆ, ಬಿಡುಗಡೆಯಾಗದ ಸಂಶೋಧನಾ ಎಐ ಮಾಡೆಲ್ ಒಂದು ತನ್ನ ಸಾಮಾನ್ಯ ನಿರ್ಬಂಧಗಳನ್ನು ಬದಿಗೊತ್ತಲು ತನಗೆ ತಾನೇ ‘ಜೈಲ್‌ಬ್ರೇಕ್’ (Jailbreak) ಮಾದರಿಯ ನಿರ್ದೇಶನಗಳನ್ನು ನೀಡಿಕೊಂಡಿದೆ. ಇತರ ಚಾಟ್‌ಬಾಟ್‌ಗಳನ್ನು ನಿಯಂತ್ರಿಸುವ ಪಾತ್ರಗಳು ಮತ್ತು ಗುರುತುಗಳಿಂದ ತಾನು ಮುಕ್ತವಾಗಬೇಕು ಎಂದು ಅದು ತನ್ನ ಟಿಪ್ಪಣಿಗಳಲ್ಲಿ ಬರೆದುಕೊಂಡಿದೆ.
ಮತ್ತೊಂದು ಪ್ರಕರಣದಲ್ಲಿ, ಎಐ ‘ಏಜೆಂಟ್’ ಒಂದು ಬಳಕೆದಾರರ ಅನುಮತಿಯಿಲ್ಲದೆಯೇ ಬ್ರೌಸರ್ ಉಲ್ಲೇಖವನ್ನು (Citation) ಪಡೆಯಲು ಅಂತರ್ಜಾಲಕ್ಕೆ ಫೈಲ್‌ಗಳನ್ನು ಅಪ್‌ಲೋಡ್ ಮಾಡಿದೆ. ಕಳೆದ ಜುಲೈನಲ್ಲಿ ಓಪನ್‌ಎಐನ ಸಿಸ್ಟಮ್ ಒಂದು ‘ಹಗ್ಗಿಂಗ್ ಫೇಸ್’ ಸ್ಟಾರ್ಟ್‌ಅಪ್ ಅನ್ನು ಹ್ಯಾಕ್ ಮಾಡಿದ್ದಾಗಿ ಹಾಗೂ ಆಂಥ್ರೋಪಿಕ್ ಸಂಸ್ಥೆಯ ಎಐ ಮಾಡೆಲ್‌ಗಳು 3 ಸಂಸ್ಥೆಗಳನ್ನು ಹ್ಯಾಕ್ ಮಾಡಿದ್ದಾಗಿ ವರದಿಯಾದ ಬೆನ್ನಲ್ಲೇ ಈ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.
ಎಐ ವ್ಯವಸ್ಥೆಗಳು ಹೆಚ್ಚು ಮುಂದುವರಿದಂತೆ ಮತ್ತು ವ್ಯಾಪಕವಾಗಿ ಬಳಕೆಯಾಗುತ್ತಿರುವಾಗ, ಅದರ ಸಂಶೋಧನೆ ಮತ್ತು ಸುರಕ್ಷತೆಯ ಬಗ್ಗೆ ಕೇವಲ ಕಂಪನಿಗಳಷ್ಟೇ ಅಲ್ಲದೆ ಹೊರಗಿನ ಜನರೂ ಸಹ ಪರಿಶೀಲಿಸುವಂತಹ ಪಾರದರ್ಶಕತೆ ಅಗತ್ಯವಿದೆ ಎಂದು ಓಪನ್‌ಎಐ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಪ್ರತಿಪಾದಿಸಿದೆ.
ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಓಮ್ಡಿಯಾದ (Omdia) ಮುಖ್ಯ ವಿಶ್ಲೇಷಕ ಲಿಯನ್ ಜೈ ಸು ಅವರ ಪ್ರಕಾರ, ಎಐ ಏಜೆಂಟ್‌ಗಳು ದಿನೇದಿನೇ ಹೆಚ್ಚು ಬುದ್ಧಿವಂತವಾಗುತ್ತಿದ್ದು, ಪರಸ್ಪರ ಮಾಹಿತಿ ಹಂಚಿಕೊಳ್ಳುವ, ವಂಚಿಸುವ ಮತ್ತು ಮುಚ್ಚಿಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿವೆ. ಇದರಿಂದಾಗಿ ಸಾಂಪ್ರದಾಯಿಕ ಭದ್ರತಾ ವಿಧಾನಗಳನ್ನು ಬಳಸಿ ಅವುಗಳನ್ನು ನಿಯಂತ್ರಿಸುವುದು ಕಷ್ಟಕರವಾಗುತ್ತಿದೆ.
ಓಪನ್‌ಎಐ ಪರಿಚಯಿಸಿರುವ ಹೊಸ ನಿಗಾ ವ್ಯವಸ್ಥೆಯು ಪ್ರಸ್ತುತ ಆಂತರಿಕ ಮತ್ತು ಸ್ವಯಂಪ್ರೇರಿತವಾಗಿದ್ದರೂ, ಇತರ ಎಐ ಡೆವಲಪರ್‌ಗಳು ಇದೇ ರೀತಿಯ ಪಾರದರ್ಶಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇದು ಪ್ರೇರಣೆ ನೀಡುವ ಸರಿಯಾದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
