ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) 2027 ರ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಲೀಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಜನವರಿ ತಿಂಗಳಲ್ಲೇ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಈ ಹಿಂದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಯುತ್ತಿದ್ದ ಈ ಕ್ರಿಕೆಟ್ ಹಬ್ಬದ 5 ನೇ ಆವೃತ್ತಿಯು 2027 ರ ಜನವರಿ 14 ರಿಂದ ಆರಂಭವಾಗಿ ಫೆಬ್ರವರಿ 7 ರವರೆಗೆ ನಡೆಯಲಿದೆ. ಪಂದ್ಯಾವಳಿಯ ದಿನಾಂಕಗಳು ನಿಗದಿಯಾಗಿದ್ದರೂ, ಪೂರ್ಣ ಪ್ರಮಾಣದ ವೇಳಾಪಟ್ಟಿ ಹಾಗೂ ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳ ಅಂತಿಮ ವಿವರಗಳನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ.
ಟೂರ್ನಿಯ ದಿನಾಂಕ ಪ್ರಕಟಣೆಯ ಜೊತೆಗೆ ಮುಂಬರುವ ಸೀಸನ್‌ನ ಆಟಗಾರ್ತಿಯರ ಮಿನಿ ಹರಾಜಿನ ದಿನಾಂಕವೂ ಬಹಿರಂಗಗೊಂಡಿದೆ. 2026 ರ ಅಕ್ಟೋಬರ್ 28 ರಂದು ಕೇರಳದ ಕೊಚ್ಚಿ ನಗರದ ಪ್ರತಿಷ್ಠಿತ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ಕೇವಲ ಒಂದು ದಿನ ನಡೆಯಲಿದೆ. ಹರಾಜಿಗೂ ಒಂದು ತಿಂಗಳು ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 28 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಳ್ಳುವ (ರಿಟೈನ್) ಹಾಗೂ ತಂಡದಿಂದ ಬಿಡುಗಡೆ ಮಾಡುವ (ರಿಲೀಸ್) ಆಟಗಾರ್ತಿಯರ ಅಂತಿಮ ಪಟ್ಟಿಯನ್ನು ಬಿಸಿಸಿಐಗೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.
ಮುಂಬರುವ ಸೀಸನ್ ಪಂದ್ಯಗಳ ಆತಿಥ್ಯ ವಹಿಸಲು ಮೂರು ನಗರಗಳ ಹೆಸರುಗಳು ಮುಂಚೂಣಿಯಲ್ಲಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಮತ್ತು ವಡೋದರಾ ನಗರಗಳ ಜೊತೆಗೆ ನೂತನವಾಗಿ ನಿರ್ಮಾಣವಾಗಿರುವ ವಾರಣಾಸಿಯ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಸಂಭಾವ್ಯ ಸ್ಥಳಗಳಾಗಿ ಗುರುತಿಸಲಾಗಿದೆ.
ವಾರಣಾಸಿಯ ಕ್ರೀಡಾಂಗಣದಲ್ಲಿ ಈವರೆಗೆ ಯಾವುದೇ ಪ್ರಮುಖ ಪಂದ್ಯಗಳು ನಡೆಯದ ಕಾರಣ, ಇಡೀ ಡಬ್ಲ್ಯೂಪಿಎಲ್ ಟೂರ್ನಿಯನ್ನು ಈ ಹೊಸ ಕ್ರೀಡಾಂಗಣದಲ್ಲೇ ಆಯೋಜಿಸುವ ಸಾಧ್ಯತೆಗಳ ಬಗ್ಗೆಯೂ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಬಾರಿಯ ಲೀಗ್‌ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ. ಈವರೆಗೆ ನಡೆದಿರುವ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಲಾ 2 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ.
