ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಉದ್ವಿಗ್ನತೆ ಮುಂದುವರಿದಿರುವ ನಡುವೆಯೂ, ಬೆಂಗಳೂರಿನಲ್ಲಿ ಮೌಲ್ಯಯುತ ಲೋಹಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗದೆ ಅಲ್ಪ ಇಳಿಕೆ ಕಂಡುಬಂದಿದೆ. ಡಾಲರ್ ಮೌಲ್ಯದ ಏರಿಳಿತದ ಪರಿಣಾಮವಾಗಿ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆ ಮಾತ್ರ ತಟಸ್ಥವಾಗಿ ಉಳಿದಿದೆ.
ಏಪ್ರಿಲ್ 7, 2026 ರ ಮಂಗಳವಾರದ ಮಾರುಕಟ್ಟೆ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ 10 ಗ್ರಾಂಗೆ 820 ರೂಪಾಯಿಗಳಷ್ಟು ಇಳಿಕೆಯಾಗಿದೆ. ಇದರೊಂದಿಗೆ 10 ಗ್ರಾಂ ಶುದ್ಧ ಚಿನ್ನದ ಬೆಲೆ 1,49,840 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ಪ್ರತಿ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ 82 ರೂಪಾಯಿ ಕಡಿತವಾಗಿದ್ದು, ದರವು 14,984 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನು, ಆಭರಣಗಳ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೂಡ ಇಳಿಕೆ ದಾಖಲಾಗಿದೆ. 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 750 ರೂಪಾಯಿಗಳಷ್ಟು ಕಡಿತವಾಗಿದ್ದು, ಪ್ರಸ್ತುತ ಬೆಲೆ 1,37,350 ರೂಪಾಯಿಗಳಿಗೆ ಇಳಿಕೆಯಾಗಿದೆ. ಹಾಗೆಯೇ ಪ್ರತಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರದಲ್ಲಿ 75 ರೂಪಾಯಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ 13,735 ರೂಪಾಯಿ ಮುಖಬೆಲೆ ಹೊಂದಿದೆ.
ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ತಟಸ್ಥ ಕಾಯ್ದುಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ 250 ರೂಪಾಯಿಗಳಾಗಿದ್ದು, ಒಂದು ಕೆಜಿ ಬೆಳ್ಳಿಯ ದರ ಬರೋಬ್ಬರಿ 2,50,000 ರೂಪಾಯಿಗಳಷ್ಟಿದೆ. ಇರಾನ್ ಮತ್ತು ಅಮೆರಿಕ ನಡುವಿನ ಭೌಗೋಳಿಕ ಮತ್ತು ರಾಜಕೀಯ ಸಂಘರ್ಷಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯವು ನಿರಂತರವಾಗಿ ಏರಿಳಿತ ಕಾಣುತ್ತಿದ್ದು, ಇದು ನೇರವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
