ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಬಾಡಿಗೆಗೆ ಪಡೆಯುವುದು ಎಷ್ಟು ಕಷ್ಟವೋ, ಮನೆ ಖಾಲಿ ಮಾಡುವಾಗ ಅಡ್ವಾನ್ಸ್ (Security Deposit) ಹಣವನ್ನು ವಾಪಸ್ ಪಡೆಯುವುದು ಅದಕ್ಕಿಂತಲೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಮನೆ ಮಾಲೀಕರೊಬ್ಬರು ಪೇಂಟಿಂಗ್ ಮತ್ತು ಕ್ಲೀನಿಂಗ್ ನೆಪದಲ್ಲಿ ಬಾಡಿಗೆದಾರನ ಅಡ್ವಾನ್ಸ್ ಹಣದಿಂದ ಬರೋಬ್ಬರಿ 51,000 ರೂ.ಗೂ ಅಧಿಕ ಮೊತ್ತವನ್ನು ಕಡಿತಗೊಳಿಸಿರುವ ಘಟನೆ ರೆಡ್ಡಿಟ್ (Reddit) ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ 2.5 BHK ಫ್ಲಾಟ್ ಖಾಲಿ ಮಾಡಿದ ಬಾಡಿಗೆದಾರರೊಬ್ಬರು ತಮ್ಮ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಹಾಗೂ ತಮ್ಮನ್ನು ಸಂಪರ್ಕಿಸದೆ ಮಾಲೀಕರು ಇಷ್ಟೊಂದು ದೊಡ್ಡ ಮೊತ್ತವನ್ನು ಕಡಿತಗೊಳಿಸಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣ ಕಡಿತದ ಲೆಕ್ಕಾಚಾರ ಹೀಗಿದೆ:
ಪೇಂಟಿಂಗ್‌ಗೆ 36,000 ರೂ.: ಮನೆ ಖಾಲಿ ಮಾಡುವ ಮುನ್ನ ಬಂದಿದ್ದ ಪೇಂಟರ್, ಪೇಂಟಿಂಗ್‌ಗೆ 20,000 ರೂ.ಗಿಂತ ಕಡಿಮೆ ಖರ್ಚಾಗಲಿದೆ ಎಂದು ಅಂದಾಜಿಸಿದ್ದ. ಆದರೆ, ಬಾಡಿಗೆದಾರರು ಮನೆ ಖಾಲಿ ಮಾಡಿದ ಬಳಿಕ ಮಾಲೀಕರು ನೇರವಾಗಿ ಪೇಂಟರ್ ಜೊತೆ ಮಾತನಾಡಿ 36,000 ರೂ. ಬಿಲ್ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಕೊಟೇಶನ್ (Quotation) ತೋರಿಸಿಲ್ಲ ಎಂಬುದು ಬಾಡಿಗೆದಾರರ ಆರೋಪ.
ಡೀಪ್ ಕ್ಲೀನಿಂಗ್‌ಗೆ 10,000 ರೂ.: ಸಾಮಾನ್ಯವಾಗಿ 3BHK ಮನೆಯ ಡೀಪ್ ಕ್ಲೀನಿಂಗ್ ಮಾಡಲು 4,500 ರಿಂದ 5,000 ರೂ. ಖರ್ಚಾಗುತ್ತದೆ. ಆದರೆ, 2.5 BHK ಮನೆಗೆ ಮಾಲೀಕರು ಬರೋಬ್ಬರಿ 10,000 ರೂ. ಕತ್ತರಿ ಹಾಕಿದ್ದಾರೆ.
ವಿಚಿತ್ರ ‘ಸೇಫ್ಟಿ ಬಫರ್’ ನೆಪದಲ್ಲಿ 5,000 ರೂ. ತಡೆ: ಉತ್ತರ ಅಮೆರಿಕದಲ್ಲಿ ವಾಸವಿರುವ ಈ ಮನೆ ಮಾಲೀಕ, ಹೊಸ ಬಾಡಿಗೆದಾರರು ಬಂದು ಎರಡು ವಾರ ಉಳಿದುಕೊಂಡ ಬಳಿಕ, ಮನೆಯಲ್ಲಿ ಬೇರೆ ಏನಾದರೂ ಹಾನಿಯಾಗಿದೆಯೇ (Wear and tear) ಎಂದು ಪರಿಶೀಲಿಸಿದ ನಂತರವೇ ಉಳಿದ 5,000 ರೂ. ವಾಪಸ್ ನೀಡುವುದಾಗಿ ವಿಚಿತ್ರ ಷರತ್ತು ವಿಧಿಸಿದ್ದಾರೆ!
“ಮಾಲೀಕರ ಈ ನಡೆ ನನಗೆ ತೀವ್ರ ಕಿರುಕುಳ ನೀಡಿದಂತಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ದಿಢೀರ್ ಬಿಲ್ ಹಾಕಿರುವುದು ನನಗೆ ಅನ್ಯಾಯ ಮಾಡಿದಂತಾಗಿದೆ” ಎಂದು ಬಾಡಿಗೆದಾರರು ತಮ್ಮ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆದಾರರ ಶೋಷಣೆ ದಿನೇದಿನೆ ಮಿತಿಮೀರುತ್ತಿದೆ ಎಂದು ನೆಟ್ಟಿಗರು ಕಮೆಂಟ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
