S Shorts

ಭೀಮಾತೀರದ 6 ಜನರ ಹತ್ಯಾಕಾಂಡ: ಪೊಲೀಸರ ಮೇಲೆಯೇ ದಾಳಿ ನಡೆಸಿದ ಮುಖ್ಯ ಆರೋಪಿ ಕಾಲಿಗೆ ಗುಂಡೇಟು

ಭೀಮಾತೀರದ 6 ಜನರ ಹತ್ಯಾಕಾಂಡ: ಪೊಲೀಸರ ಮೇಲೆಯೇ ದಾಳಿ ನಡೆಸಿದ ಮುಖ್ಯ ಆರೋಪಿ ಕಾಲಿಗೆ ಗುಂಡೇಟು
Author: Meghana Gowda
Posted By: Meghana Gowda
Updated: Jun 22, 2026 | 10:35 AM

ವಿಜಯಪುರ: ಭೀಮಾತೀರದಲ್ಲಿ ನಡೆದಿದ್ದ ಭೀಕರ 6 ಜನರ ಸಾಮೂಹಿಕ ಹತ್ಯಾಕಾಂಡ (Mass Murder Case) ಪ್ರಕರಣದ ಪ್ರಮುಖ ಆರೋಪಿ ಮಹೇಶ್ ತಳವಾರ್ (Mahesh Talwar) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ಚಡಚಣ ತಾಲ್ಲೂಕಿನ ಇಟ್ಟಿಂಗಿಹಾಳ (Ittingihal) ಗ್ರಾಮದ ಹೊರವಲಯದಲ್ಲಿ ಈ ಎನ್‌ಕೌಂಟರ್ ನಡೆದಿದೆ.

ಕಳೆದ 23 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಮಹೇಶ್ ತಳವಾರ್ ಅಡಗಿರುವ ಬಗ್ಗೆ ಮಾಹಿತಿ ಪಡೆದ ಚಡಚಣ ಸಿಪಿಐ ಪರಶುರಾಮ್ ಮನಗೂಳಿ (CPI Parashuram Managuli) ನೇತೃತ್ವದ ತಂಡ ಇಟ್ಟಿಂಗಿಹಾಳಕ್ಕೆ ಧಾವಿಸಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಕಲ್ಲುಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಠಾತ್ ದಾಳಿ ನಡೆಸಿದ್ದಾನೆ. ಆರೋಪಿಯ ದಾಳಿಯಿಂದ ಚಡಚಣ ಠಾಣೆಯ ಸಿಬ್ಬಂದಿಗಳಾದ ಶೇಖರ್ ಪವಾರ್ (Shekar Pawar) ಹಾಗೂ ವಿಜಯಕುಮಾರ್ ಬನಸೋಡೆ (Vijayakumar Banasode) ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯ ದಾಳಿಯಿಂದ ಆತ್ಮರಕ್ಷಣೆಗಾಗಿ ಸಿಪಿಐ ಪರಶುರಾಮ್ ಮನಗೂಳಿ ಅವರು ಮಹೇಶ್ ತಳವಾರ್ ಬಲಗಾಲಿಗೆ ಗುಂಡು ಹಾರಿಸಿ (Shot in the leg) ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

15 ಲಕ್ಷ ಸುಪಾರಿ ಪಡೆದು ಹತ್ಯಾಕಾಂಡ! ಕಳೆದ ಮೇ 29 ರಂದು ಚಡಚಣದ ಗೋವಿಂದಪುರ (Govindapura) ಗ್ರಾಮದ ಜಮೀನಿನಲ್ಲಿ ನಿರಾಳೆ ಕುಟುಂಬದ (Nirale Family) 5 ಜನರು ಸೇರಿದಂತೆ ಒಟ್ಟು 6 ಜನರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯಾಕಾಂಡ ನಡೆಸಲು ಮಹೇಶ್ ತಳವಾರ್ ಮತ್ತು ಗ್ಯಾಂಗ್ ಬರೋಬ್ಬರಿ 15 ಲಕ್ಷ ರೂಪಾಯಿ ಸುಪಾರಿ (Contract Killing) ಪಡೆದಿತ್ತು. ಸಾಮೂಹಿಕ ಕೊಲೆಗಾಗಿ ಹುಡುಗರನ್ನು ಒಟ್ಟುಗೂಡಿಸಿದ್ದ ಮಹೇಶ್, ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ. ಸದ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮುಖ್ಯ ಆರೋಪಿಯನ್ನು ಜೈಲಿಗಟ್ಟಿದ್ದಾರೆ.