S Shorts

Bhadravatiಯಲ್ಲಿ ಭೀಕರ ಸಿಡಿಲಿಗೆ 53 ಕುರಿಗಳು ಬಲಿ, 10 ಲಕ್ಷ ರೂ. ನಷ್ಟ: ಕಣ್ಣೀರಿಟ್ಟ ಕುರಿಗಾಹಿ!

Bhadravatiಯಲ್ಲಿ ಭೀಕರ ಸಿಡಿಲಿಗೆ 53 ಕುರಿಗಳು ಬಲಿ, 10 ಲಕ್ಷ ರೂ. ನಷ್ಟ: ಕಣ್ಣೀರಿಟ್ಟ ಕುರಿಗಾಹಿ!
Author: Sagaradventure
Posted By: Sagaradventure
Updated: May 18, 2026 | 4:07 PM

ಭದ್ರಾವತಿ ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಭಾರಿ ಗುಡುಗು-ಸಿಡಿಲು ಸಹಿತ ಮಳೆಯಿಂದಾಗಿ ಭೀಕರ ಅನಾಹುತವೊಂದು ಸಂಭವಿಸಿದೆ. ತಾಲೂಕಿನ ಸಿರಿಯೂರು ಗ್ರಾಮದ ಬಳಿ ದಿಢೀರನೆ ಸಿಡಿಲು ಬಡಿದ ಪರಿಣಾಮ ಬರೋಬ್ಬರಿ 53 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕುರಿಗಾಹಿ ನರಸಿಂಹಮೂರ್ತಿ ಎಂಬುವವರು ಈ ದುರ್ಘಟನೆಯಲ್ಲಿ ಭಾರಿ ನಷ್ಟ ಅನುಭವಿಸಿದ್ದಾರೆ. ಅವರು ತಮ್ಮ ಸುಮಾರು 400 ಕುರಿಗಳ ಹಿಂಡನ್ನು ಮೇಯಿಸಿಕೊಂಡು ಭದ್ರಾವತಿ ತಾಲೂಕಿನ ಸಿರಿಯೂರು ಗ್ರಾಮದ ಬಳಿ ಬಂದಿದ್ದರು. ಭಾನುವಾರ ರಾತ್ರಿ ಸಿರಿಯೂರಿನ ರವಿಕುಮಾರ್ ಎಂಬುವವರ ತೋಟದಲ್ಲಿ ಕುರಿಗಳನ್ನು ಬಿಟ್ಟು ವಾಸ್ತವ್ಯ ಹೂಡಿದ್ದರು. ಆದರೆ, ಸಂಜೆ 7 ಗಂಟೆಯ ಸುಮಾರಿಗೆ ಪ್ರಕೃತಿ ಮುನಿಸಿಕೊಂಡಂತೆ ಎರಗಿದ ಭೀಕರ ಸಿಡಿಲು ಕುರಿಮಂದೆಯ ಮೇಲೆಯೇ ಬಿದ್ದಿದೆ.

ಆಕಾಶದಿಂದ ಅಪ್ಪಳಿಸಿದ ಸಿಡಿಲಿನ ತೀವ್ರತೆಗೆ ನರಸಿಂಹಮೂರ್ತಿ ಅವರಿಗೆ ಸೇರಿದ 53 ಕುರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ. ಕಣ್ಣೆದುರೇ ತಮ್ಮ ಮೂಕ ಜೀವಿಗಳು ಮೃತಪಟ್ಟಿರುವುದನ್ನು ಕಂಡು ಕುರಿಗಾಹಿ ನರಸಿಂಹಮೂರ್ತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಅನಿರೀಕ್ಷಿತ ದುರಂತದಿಂದಾಗಿ ಅವರಿಗೆ ಸುಮಾರು 10 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅನಾಹುತದ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯಾಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರ (ವಿಎ) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಸಂತ್ರಸ್ತ ಕುರಿಗಾಹಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದೆ. ಇದೇ ವೇಳೆ ಪಶುವೈದ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿ ವರ್ಗದವರು ಸ್ಥಳದಲ್ಲೇ ಮೃತಪಟ್ಟ ಎಲ್ಲಾ 53 ಕುರಿಗಳ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

ಬಡ ಕುರಿಗಾಹಿಗೆ ಆಗಿರುವ ಈ ಭಾರಿ ನಷ್ಟದ ಕುರಿತು ಕಂದಾಯ ಇಲಾಖೆಯು ಸಂಪೂರ್ಣ ವಿವರಗಳನ್ನೊಳಗೊಂಡ ವರದಿಯನ್ನು ಸಿದ್ಧಪಡಿಸಿದೆ. ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವಾಗಿ ಸೂಕ್ತ ಪರಿಹಾರ ಧನ ಕೊಡಿಸುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳಿಗೆ ಈ ವರದಿಯನ್ನು ರವಾನಿಸಲಾಗಿದೆ.