ಬೀದರ್: 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ಬಳಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು.
ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಏಪ್ರಿಲ್ 14ರಂದು ಬೆಳ್ಳಗ್ಗೆ 10 ಗಂಟೆಗೆ ತರಕಾರಿ ತೆಗೆದುಕೊಂಡು ಬರಲು ಸಮೀರ್ ರೂಮ್‌ನಿಂದ ಹೊರ ಬಂದಿದ್ದಾನೆ. ತರಕಾರಿ ಖರೀದಿಸಿ ಹಿಂದಿರುಗುವಾಗ ಬಿಸಿಲಿನ ಪ್ರಮಾಣ ಏರಿಕೆಯಾಗಿತ್ತು. ಈ ವೇಳೆ ರಸ್ತೆ ಬದಿಯ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ್ದಿದ್ದನು.
ಕಳೆದ ಹಲವು ತಿಂಗಳಿಂದ ಮೃತ ಸಮೀರ್ ಕಮಲನಗರ ಪಟ್ಟಣದ ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು. ಬಿಸಿಲಿನ ತಾಪ ತಾಳಲಾರದೇ ತಲೆ ಸುತ್ತು ಬಿದ್ದು ಸಮೀರ್ ಮೃತನಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ 35 ರಿಂದ 38 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ದಾಖಲಾಗುತ್ತಿದೆ. ಬೇಸಿಗೆಯ ಹೊಡೆತಕ್ಕೆ ಈಗಾಗಲೇ ಕೃಷಿಹೊಂಡ, ಹಳ್ಳ, ಕೊಳ್ಳಗಳು ಬತ್ತಿ ಹೋಗುತ್ತಿದ್ದು, ಜಾನುವಾರುಗಳು ಸಹ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
