S Shorts

Bidarನಲ್ಲಿ ದಾರುಣ ಘಟನೆ: ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿನಿ ದುಡುಕಿನ ನಿರ್ಧಾರ! ಸಹಪಾಠಿಯ ಕಿರುಕುಳ?

Bidarನಲ್ಲಿ ದಾರುಣ ಘಟನೆ: ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿನಿ ದುಡುಕಿನ ನಿರ್ಧಾರ! ಸಹಪಾಠಿಯ ಕಿರುಕುಳ?
Author: Sagaradventure
Posted By: Sagaradventure
Updated: Mar 12, 2026 | 1:30 PM

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದ್ದು, ಸಹಪಾಠಿಯ ಕಿರುಕುಳಕ್ಕೆ ಬೇಸತ್ತ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದ ಮಹಡಿ ಮೇಲಿಂದ ಜಿಗಿದು ಆತ್ಮಹ*ತ್ಯೆಗೆ ಶರಣಾಗಿದ್ದಾಳೆ. ಮೃ*ತ ದುರ್ದೈವಿ ಬಾಲಕಿಯನ್ನು ಭೆಮಳಖೇಡ ಗ್ರಾಮದ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ.

ತನ್ನನ್ನು ಪ್ರೀತಿಸುವಂತೆ ಸಹಪಾಠಿ ವಿದ್ಯಾರ್ಥಿಯೊಬ್ಬ ನಿರಂತರವಾಗಿ ಒತ್ತಾಯಿಸುತ್ತಿದ್ದ ಹಾಗೂ ಚುಡಾಯಿಸುತ್ತಿದ್ದ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕಿರುಕುಳ ಹಾಗೂ ಮಾನಸಿಕ ಹಿಂಸೆಯನ್ನು ತಾಳಲಾರದೆ ತೀವ್ರವಾಗಿ ಮನನೊಂದ ಬಾಲಕಿ, ಶಾಲೆಯ ಕಟ್ಟಡದ ಮೇಲಿಂದ ಹಾರಿ ಪ್ರಾ*ಣ ಕಳೆದುಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಈ ಕಿಡಿಗೇಡಿ ವಿದ್ಯಾರ್ಥಿಯು ಆಕೆಯನ್ನು ಚುಡಾಯಿಸುತ್ತಿದ್ದ ಕೆಲವು ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಸೆರೆಯಾಗಿವೆ. ಆದಾಗ್ಯೂ, ವಿದ್ಯಾರ್ಥಿನಿಯ ಸಾ*ವಿಗೆ ಈ ಕಿರುಕುಳವೇ ನಿಖರ ಕಾರಣವೇ ಅಥವಾ ಬೇರೆ ಏನಾದರೂ ಒತ್ತಡವಿತ್ತೇ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.

ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಭೆಮಳಖೇಡ ಪೊಲೀಸ್ ಠಾಣೆಯ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಮೃ*ತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವಿಚಾರಣೆ ಚುರುಕುಗೊಂಡಿದ್ದು, ಶಾಲೆಯ ಆವರಣದಲ್ಲೇ ನಡೆದ ಈ ದುರಂತವು ಪೋಷಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಮೂಡಿಸಿದೆ.