S Shorts

ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಬಂಡಾಯ: ಸುರ್ಜೇವಾಲಾಗೆ ಸಿದ್ದರಾಮಯ್ಯ ತರಾಟೆ, 12 ಶಾಸಕರಿಂದ ರಾಜೀನಾಮೆ ಬೆದರಿಕೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಬಂಡಾಯ: ಸುರ್ಜೇವಾಲಾಗೆ ಸಿದ್ದರಾಮಯ್ಯ ತರಾಟೆ, 12 ಶಾಸಕರಿಂದ ರಾಜೀನಾಮೆ ಬೆದರಿಕೆ
Author: Sagaradventure
Posted By: Sagaradventure
Updated: Aug 3, 2026 | 3:14 PM

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಬಂಡಾಯ ಮತ್ತು ಅಸಮಾಧಾನ ಸ್ಫೋಟಗೊಂಡಿದೆ. ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದ ನಾಯಕರಿಗೆ ಅವಕಾಶ ನೀಡುವಂತೆ ತಾವು ಸೂಚಿಸಿದ್ದರೂ, ತಮ್ಮ ಗಮನಕ್ಕೆ ತಾರದೆ ಗಾಯತ್ರಿ ಶಾಂತೇಗೌಡ ಅವರಿಗೆ ಸ್ಥಾನ ನೀಡಿರುವುದು ಸರಿಯಲ್ಲ. ಕೂಡಲೇ ಈ ಹೆಸರನ್ನು ಬದಲಾಯಿಸುವಂತೆ ಸಿದ್ದರಾಮಯ್ಯ ವರಿಷ್ಠರಿಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

19 ಶಾಸಕರಿಂದ ಪ್ರಮಾಣವಚನ, ಉಮಾಶ್ರೀಗೆ ಒಲಿಯುವ ಸಾಧ್ಯತೆ 

ಈ ಹೈಡ್ರಾಮಾದ ನಡುವೆಯೇ ಇಂದು 19 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಸಿದ್ದರಾಮಯ್ಯನವರ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗಾಯತ್ರಿ ಶಾಂತೇಗೌಡ ಅವರನ್ನು ಹೊರತುಪಡಿಸಿ ಉಳಿದವರು ಮಾತ್ರ ಇಂದು ಪದಗ್ರಹಣ ಮಾಡಲಿದ್ದಾರೆ. ಗಾಯತ್ರಿ ಅವರ ಬದಲಿಗೆ ಹಿರಿಯ ನಾಯಕಿ ಹಾಗೂ ಎಂಎಲ್ಸಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ.

12 ಅತೃಪ್ತ ಶಾಸಕರಿಂದ ರಾಜೀನಾಮೆ ಅಸ್ತ್ರ 

ಮತ್ತೊಂದೆಡೆ, ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರ ರಾಜೀನಾಮೆ ಪರ್ವ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಚಿವ ಸ್ಥಾನ ವಂಚಿತರಾಗಿರುವ ಸುಮಾರು 12 ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ನಾಳೆಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸರ್ಕಾರ ಮತ್ತು ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.