S Shorts

ಕಾವೇರಿ ಬಿಕ್ಕಟ್ಟು: ‘ಕರ್ನಾಟಕ ಬಂದ್’ ಕೈಬಿಡಲು CM ಡಿ.ಕೆ.ಶಿವಕುಮಾರ್ ಮನವಿ; ತಮಿಳುನಾಡು CM ವಿಜಯ್ ಭೇಟಿ ಮುಂದೂಡಿಕೆ

ಕಾವೇರಿ ಬಿಕ್ಕಟ್ಟು: ‘ಕರ್ನಾಟಕ ಬಂದ್’ ಕೈಬಿಡಲು CM ಡಿ.ಕೆ.ಶಿವಕುಮಾರ್ ಮನವಿ; ತಮಿಳುನಾಡು CM ವಿಜಯ್ ಭೇಟಿ ಮುಂದೂಡಿಕೆ
Author: Sagaradventure
Posted By: Sagaradventure
Updated: Jul 31, 2026 | 3:26 PM

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ಆದೇಶ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 

ಸಂಕಷ್ಟದ ಸಮಯದಲ್ಲಿ ಇಂತಹ ತೀರ್ಪು ಹೊರಬಿದ್ದಿರುವುದು ಆಘಾತಕಾರಿ ಎಂದಿರುವ ಅವರು, “CWRC ಆದೇಶವನ್ನು ನಾವು ಒಪ್ಪದೆ, ತಕ್ಷಣವೇ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದೆವು. ರಾಜ್ಯದ ಪರ ಎಸಿಎಸ್ ಗೌರವ್ ಗುಪ್ತಾ ಅವರು ಪ್ರಬಲ ವಾದ ಮಂಡಿಸಿದ್ದಾರೆ. ನಾನು ಕೇವಲ ರಾಜ್ಯದ ಜನತೆಗೆ ಉತ್ತರ ಕೊಡಲು ಬದ್ಧನಾಗಿದ್ದೇನೆಯೇ ವಿನಃ, ಸುಖಾಸುಮ್ಮನೆ ಆರೋಪ ಮಾಡುವ ವಿರೋಧ ಪಕ್ಷಗಳಿಗಲ್ಲ” ಎಂದು ಗುಡುಗಿದರು.

ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದ ಸಿಎಂ, ದೆಹಲಿಯಲ್ಲಿ 36 ಸಂಸದರು ಹಾಗೂ ಕೇಂದ್ರ ಸಚಿವರ ಜೊತೆ ನಡೆಸಿದ ಸಭೆಯನ್ನು ಸ್ಮರಿಸಿದರು. ಇದರಲ್ಲಿ ಬಿಜೆಪಿ ಸಂಸದರು ಕೂಡ ಪ್ರಾಮಾಣಿಕವಾಗಿ ಸಹಕರಿಸಿ, ಕೇಂದ್ರ ಜಲ ಸಚಿವರ ಮೇಲೆ ಒತ್ತಡ ಹೇರಿದ್ದಾರೆ ಎಂದು ಶ್ಲಾಘಿಸಿದರು. 

ಇದೇ ವೇಳೆ, ಆಗಸ್ಟ್ 3ರಂದು ತಮಿಳುನಾಡು ನೂತನ ಸಿಎಂ ವಿಜಯ್ ಅವರು ಸೌಹಾರ್ದಯುತ ಮಾತುಕತೆಗಾಗಿ ಸಚಿವರೊಂದಿಗೆ ಬೆಂಗಳೂರಿಗೆ ಆಗಮಿಸಬೇಕಿತ್ತು. ಆದರೆ, ಕಾವೇರಿ ವಿಚಾರವಾಗಿ ನಡೆಯುತ್ತಿರುವ ಹೋರಾಟದ ಬಿಸಿಯಿಂದಾಗಿ, ಅವರ ಭೇಟಿಯ ವೇಳೆ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಅವರನ್ನು ಕರೆಸಿ ಬೇಸರ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ, ಭೇಟಿಯನ್ನು ಮುಂದೂಡುವಂತೆ ವಿಜಯ್ ಅವರಿಗೆ ಫೋನ್ ಮೂಲಕವೇ ಮನವಿ ಮಾಡಲಾಗಿದೆ ಹಾಗೂ ಸದ್ಯಕ್ಕೆ ಆ ಸಭೆ ನಡೆಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯದ ಮತ್ತು ರೈತರ ಹಿತಾಸಕ್ತಿ ಕಾಯುವುದು ಸರ್ಕಾರದ ಪರಮೋಚ್ಚ ಆದ್ಯತೆಯಾಗಿದೆ ಎಂದ ಸಿಎಂ, ಕಾವೇರಿ ವಿಚಾರದಲ್ಲಿ ಪ್ರತಿಭಟನೆ ಮಾಡುವುದು ತಪ್ಪಲ್ಲ, ಆದರೆ ‘ಕರ್ನಾಟಕ ಬಂದ್’ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸ್ಪಷ್ಟಪಡಿಸಿದರು. 

ಬಂದ್‌ನಿಂದ ಬೇರೆಯದೇ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಬಂದ್ ಕೈಬಿಡುವಂತೆ ಕನ್ನಡಪರ ಹೋರಾಟಗಾರರಲ್ಲಿ ಮನವಿ ಮಾಡಿದ ಅವರು, ಶೀಘ್ರದಲ್ಲೇ ಹೋರಾಟಗಾರರ ಭೇಟಿಯಾಗಿ ಅವರ ಸಲಹೆಗಳನ್ನು ಆಲಿಸುವುದಾಗಿ ಭರವಸೆ ನೀಡಿದರು. ಮುಂಬರುವ ಸರ್ವಪಕ್ಷ ಸಭೆ ಹಾಗೂ ಕಾನೂನು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕವೇ ಕಾವೇರಿ ಹೋರಾಟದ ಮುಂದಿನ ಕಾನೂನುಬದ್ಧ ಹೆಜ್ಜೆಗಳನ್ನು ಇಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.