S Shorts

ಹಿಂದೂ ಮಹಾಸಾಗರದಲ್ಲಿ ದಿಢೀರ್ ಹವಾಮಾನ ಬದಲಾವಣೆ: ರಾಜ್ಯದಲ್ಲಿ ಮುಂಗಾರು ಚುರುಕು, ಮತ್ತಷ್ಟು ಮಳೆ ಸಾಧ್ಯತೆ

ಹಿಂದೂ ಮಹಾಸಾಗರದಲ್ಲಿ ದಿಢೀರ್ ಹವಾಮಾನ ಬದಲಾವಣೆ: ರಾಜ್ಯದಲ್ಲಿ ಮುಂಗಾರು ಚುರುಕು, ಮತ್ತಷ್ಟು ಮಳೆ ಸಾಧ್ಯತೆ
Author: Sagaradventure
Posted By: Sagaradventure
Updated: Aug 3, 2026 | 3:24 PM

ಎಲ್ ನಿನೋ (El Nino) ಪರಿಣಾಮದ ನಡುವೆಯೂ ಹಿಂದೂ ಮಹಾಸಾಗರದಲ್ಲಿ ಉಂಟಾಗಿರುವ ಹಠಾತ್ ಹವಾಮಾನ ಬದಲಾವಣೆಗಳು ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಲು ಕಾರಣವಾಗಿವೆ. ವಿಶ್ವ ಹವಾಮಾನ ಇಲಾಖೆಯ ವರದಿಗಳ ಪ್ರಕಾರ, ಸಕಾರಾತ್ಮಕ ಇಂಡಿಯನ್ ಓಷನ್ ಡೈಪೋಲ್ (IOD) ಪರಿಣಾಮದಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಹಾಮಳೆ ಮುಂದುವರಿಯುವ ಲಕ್ಷಣಗಳಿವೆ.

ಮುಂಗಾರು ಚುರುಕಾಗಲು ಕಾರಣವಾದ ಪ್ರಮುಖ ಅಂಶಗಳು:

ಇಂಡಿಯನ್ ಓಷನ್ ಡೈಪೋಲ್ (IOD) ಸಕಾರಾತ್ಮಕವಾಗಿದ್ದು, ಇದು ದಕ್ಷಿಣ ಆಫ್ರಿಕಾ ತೀರದ ಮೂಲಕ ಅರಬ್ಬಿ ಸಮುದ್ರದ ಕಡೆಗೆ ದಕ್ಷಿಣ ಧ್ರುವದಿಂದ ಹೆಚ್ಚು ತೇವಾಂಶ ಭರಿತ ಮೋಡಗಳನ್ನು ಹೊತ್ತುತರುತ್ತಿದೆ.

ಜಪಾನ್‌ನ ಆಗ್ನೇಯ ಭಾಗದಲ್ಲಿ ಅಪ್ಪಳಿಸಿರುವ ಬೃಹತ್ ಚಂಡಮಾರುತ ಹಾಗೂ ಫಿಲಿಪ್ಪೀನ್ಸ್ ಉತ್ತರದ ವಾಯುಭಾರ ಕುಸಿತದಿಂದಾಗಿ ಆಸ್ಟ್ರೇಲಿಯಾ ಕಡೆಯಿಂದ ಕಡಿಮೆ ಉಷ್ಣಾಂಶದ (ತಂಪಾದ) ಮಾರುತಗಳು ಬೀಸುತ್ತಿವೆ. ಜಪಾನ್‌ನ ಚಂಡಮಾರುತ ಮತ್ತು ಫಿಲಿಪ್ಪೀನ್ಸ್‌ನ ವಾಯುಭಾರ ಕುಸಿತವು ಬಂಗಾಳಕೊಲ್ಲಿಯ ಗಾಳಿಯನ್ನು ತಮ್ಮತ್ತ ಸೆಳೆಯುತ್ತಿರುವುದರಿಂದ, ರಾಜ್ಯದತ್ತ ಮುಂಗಾರು ಮಾರುತಗಳ ಚಲನೆಗೆ ಅತ್ಯಂತ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ.

ಪ್ರಸ್ತುತ ರಾಜ್ಯದ ಕರಾವಳಿ ಸಮೀಪದ ಕೆಳಸ್ತರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದು ಇಂದಿನ ಸಂಜೆ ವೇಳೆಗೆ ಶಿಥಿಲಗೊಳ್ಳುವ ನಿರೀಕ್ಷೆಯಿದೆ.

ಒಳನಾಡಿಗೆ ಕಾಡುತ್ತಿರುವ ಮಳೆ ಕೊರತೆ:

ಈ ಎಲ್ಲಾ ಜಾಗತಿಕ ಹವಾಮಾನ ಬದಲಾವಣೆಗಳ ಪರಿಣಾಮವಾಗಿ ರಾಜ್ಯದಲ್ಲಿ ಉತ್ತಮ ಮುಂಗಾರು ಮುಂದುವರಿಯಲಿದೆ. ಆದರೆ, ತೀವ್ರ ಮಳೆಯಿಂದ ತತ್ತರಿಸಿರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿ, ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗದಿರುವುದು ವಿಪರ್ಯಾಸವಾಗಿದೆ. ಹವಾಮಾನ ತಜ್ಞರ ಪ್ರಕಾರ, ಇಂದಿನಿಂದ ಒಳನಾಡು ಭಾಗಗಳಲ್ಲಿಯೂ ಹವಾಮಾನ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳಿದ್ದು, ಮಳೆ ಆರಂಭವಾದರೆ ಮಾತ್ರ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರಸ್ತುತ ಇರುವ ಮಳೆಯ ಒತ್ತಡ ಕಡಿಮೆಯಾಗಲಿದೆ.