ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯದ ಪ್ರಗತಿ ಪರಿಶೀಲನಾ ಸಭೆಯು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಂ.ಜಿ. ರಸ್ತೆಯಲ್ಲಿರುವ ಆಯುಕ್ತರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಿಗದಿತ ಅವಧಿಯೊಳಗೆ ಪಾರದರ್ಶಕವಾಗಿ ಎಸ್.ಐ.ಆರ್ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸಲು ಮತ್ತು ಮತದಾರರ ನೋಂದಣಾಧಿಕಾರಿಗಳು (ಇ.ಆರ್.ಓ) ಹಾಗೂ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಒಂದು ತಂಡವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು ನಿರ್ದೇಶನ ನೀಡಿದರು.
ಗೈರುಹಾಜರು, ಸ್ಥಳಾಂತರಗೊಂಡ ಹಾಗೂ ಮೃತ (ASDD) ಮತದಾರರ ಗುರುತಿಸುವಿಕೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು ಮತ್ತು ಮೃತ ಮತದಾರರ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರ ಅಥವಾ ಸ್ಥಳೀಯರ ಸಹಿಯೊಂದಿಗೆ ‘ಮಹಾಜರ್’ ಕಡ್ಡಾಯವಾಗಿ ಪಡೆಯಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.
ಎಸ್.ಐ.ಆರ್. ಕಾರ್ಯದ ಯಶಸ್ವಿಗಾಗಿ ಶ್ರಮಿಸುತ್ತಿರುವ ಬಿ.ಎಲ್.ಓ.ಗಳೊಂದಿಗೆ ಮೇಲಾಧಿಕಾರಿಗಳು ಸಂಯಮದಿಂದ ವರ್ತಿಸಬೇಕು ಹಾಗೂ ಅವರ ಬಾಕಿ ಸಂಭಾವನೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಾಕೀತು ಮಾಡಿದರು. ಇದೇ ವೇಳೆ, ಮತದಾರರು ಹಾಗೂ ಬಿ.ಎಲ್.ಓ.ಗಳ ಕಡ್ಡಾಯ ಸಹಿ ಇರುವ ಅರ್ಜಿಗಳನ್ನು ಮಾತ್ರ ಡಿಜಿಟೈಸ್ ಮಾಡಬೇಕು ಮತ್ತು ಸಹಿ ಇಲ್ಲದ ಅರ್ಜಿಗಳನ್ನು ಅಮಾನ್ಯಗೊಳಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ. ಅವರು ಮಾತನಾಡಿ, ಮನೆ-ಮನೆ ಭೇಟಿ ಕಾರ್ಯವನ್ನು ಸುಗಮಗೊಳಿಸಲು ಅಧಿಕಾರಿಗಳು ಮುಂಚಿತವಾಗಿ ಮತದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಭೇಟಿಯ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ನಾಗರಿಕರು ಮೊದಲೇ ಗಣತಿ ನಮೂನೆಯನ್ನು ಭರ್ತಿ ಮಾಡಿಟ್ಟುಕೊಳ್ಳುವುದರಿಂದ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದರು.
ಸಭೆಯಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ವಿ., ಕಂದಾಯ ಅಪರ ಆಯುಕ್ತ ರಂಗನಾಥ್ ಕೆ., ಜಂಟಿ ಆಯುಕ್ತ ಹೇಮಂತ್ ಶರಣ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
