ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರತ್ತ ಶೂ ಎಸೆದ ಘಟನೆ ಸಂಬಂಧ, ಅಟಾರ್ನಿ ಜನರಲ್ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಸಮ್ಮತಿ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಗುರುವಾರ ಮಾಹಿತಿ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಮುಖ್ಯಸ್ಥ ವಕೀಲ ವಿಕಾ ಸಿಂಗ್ ಅವರು ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಮನವಿ ಸಲ್ಲಿಸಿದರು.
ಅಕ್ಟೋಬರ್ 6ರಂದು ನಡೆದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸುಪ್ರೀಂಕೋರ್ಟ್ ಸಮಗ್ರತೆ ಮತ್ತು ಘನತೆಯನ್ನು ಅವಮಾನ ಮಾಡಲಾಗುತ್ತಿದೆ. ಎಲ್ಲಾ ರೀತಿಯ ಅವಹೇಳನಕಾರಿ ಕಾಮೆಂಟ್‌ಗಳು ನಡೆದಿದೆ ಎಂದು ಸಿಂಗ್ ಹೇಳಿದ್ದಾರೆ.
ಮೆಹ್ತಾ ಮತ್ತು ಸಿಂಗ್ ಅವರು ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ನ್ಯಾಯಪೀಠವು ಅಭಿಪ್ರಾಯಪಟ್ಟಿದ್ದು, ಮಾತು ಮತ್ತು ಅಭಿವ್ಯಕ್ತಿಯ ಹಕ್ಕು ಸಂಪೂರ್ಣವಲ್ಲ ಮತ್ತು ಇತರರ ಸಮಗ್ರತೆ ಮತ್ತು ಘನತೆಗೆ ಕುಂದು ತರಬಾರದು. ಈ ಘಟನೆ ಸಾಮಾಜಿಕ ಮಾಧ್ಯಮದ ಅನಿಯಂತ್ರಿತ ಸ್ವಭಾವದ ದುಷ್ಪರಿಣಾಮಗಳನ್ನು ಎತ್ತಿ ತೋರಿಸಿದೆ.
ಆದಾಗ್ಯೂ, ತುರ್ತಾಗಿ ನ್ಯಾಯಾಂಗ ನಿಂದನೆ ಪ್ರಕರಣ ಪಟ್ಟಿಗೆ ಸೇರಲು ಇಷ್ಟಪಟ್ಟಿಲ್ಲ; ಪೀಠವು ಒಂದು ವಾರದ ನಂತರ ನಿರ್ಧಾರ ತೆಗೆದುಕೊಳ್ಳುತ್ತದೆಯೆಂದು ತಿಳಿಸಿತು.
