S Shorts

ರಾಜ್ಯದಲ್ಲಿ ತೀವ್ರ ಬರಗಾಲ; ಕುಡಿಯುವ ನೀರಿಗೆ ₹1 ಕೋಟಿ ಹೆಚ್ಚುವರಿ ಅನುದಾನ ಘೋಷಿಸಿದ CM ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ ತೀವ್ರ ಬರಗಾಲ; ಕುಡಿಯುವ ನೀರಿಗೆ ₹1 ಕೋಟಿ ಹೆಚ್ಚುವರಿ ಅನುದಾನ ಘೋಷಿಸಿದ CM ಡಿ.ಕೆ.ಶಿವಕುಮಾರ್
Author: Sagaradventure
Posted By: Sagaradventure
Updated: Jul 19, 2026 | 2:38 PM

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ‌ ಜೊತೆ ಮಹತ್ವದ ವಿಡಿಯೋ ಸಂವಾದ ನಡೆಸಿದ್ದಾರೆ. ಬರ ನಿರ್ವಹಣೆ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರುವ ಮುಖ್ಯಮಂತ್ರಿಯವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಅಧಿಕಾರಿಗಳಿಗೆ ಸಿಎಂ ನೀಡಿದ ಪ್ರಮುಖ ಮಾರ್ಗದರ್ಶನಗಳು

ಗ್ರಾಮೀಣ ತಾಲ್ಲೂಕುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸರ್ಕಾರ ತಕ್ಷಣವೇ ₹1 ಕೋಟಿ ಹೆಚ್ಚುವರಿ ಅನುದಾನ ಘೋಷಿಸಿದೆ. ಇದೇ ವೇಳೆ ಬೋಗಸ್ ಬೋರ್‌ವೆಲ್‌ಗಳ ದಂಧೆಗೆ ಬ್ರೇಕ್ ಹಾಕಲು ಸೂಚಿಸಿರುವ ಸಿಎಂ, ಇನ್ನು ಮುಂದೆ ಹೊಸ ಬೋರ್‌ವೆಲ್‌ ಕೊರೆಸುವಾಗ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ಮತ್ತು ಯಾವುದೇ ನಕಲಿ ಪ್ರಕರಣಗಳು ಕಂಡುಬಂದರೆ ಅದಕ್ಕೆ ಆಯಾ ಜಿಲ್ಲಾ ಪಂಚಾಯಿತಿ ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿಯ ಸಮಗ್ರ ವರದಿಯನ್ನು ಸಲ್ಲಿಸಿ ವಾಸ್ತವಾಂಶವನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಹಿತ ಕಾಯುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದ್ದು, ಕೃಷಿ, ಪಶುಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಟ್ರಾನ್ಸ್‌ಫಾರ್ಮರ್‌ಗಳ ತ್ವರಿತ ರಿಪೇರಿಗಾಗಿ ವಿಶೇಷ ಗಮನ ನೀಡಲಾಗುತ್ತಿದ್ದು, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು 4G ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಕೊನೆಯದಾಗಿ, ಅಧಿಕಾರಿಗಳು ಕೇವಲ ಕಾಗದದ ಮೇಲೆ ವರದಿ ನೀಡುವುದನ್ನು ನಿಲ್ಲಿಸಿ, ಖುದ್ದಾಗಿ ಫೀಲ್ಡ್‌ಗಿಳಿದು ‘ಟೀಮ್ ಕರ್ನಾಟಕ’ (TEAM KARNATAKA) ಮನಸ್ಥಿತಿಯೊಂದಿಗೆ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಆತಂಕ ಹುಟ್ಟಿಸುವ ಮಳೆ ಹಾಗೂ ಜಲಮಟ್ಟದ ಅಂಕಿ-ಅಂಶಗಳು

ಜುಲೈ 18ರವರೆಗೆ ರಾಜ್ಯದಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಒಟ್ಟಾರೆ ಶೇ. 39ರಷ್ಟು ಕೊರತೆಯಾಗಿದೆ. ರಾಜ್ಯದ 170ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಮಳೆ ಅಭಾವವಿದ್ದು, ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಶೇ. 67 ರಷ್ಟು ಮಳೆ ಕೊರತೆ ದಾಖಲಾಗಿದೆ. ಪ್ರಾದೇಶಿಕವಾಗಿ ನೋಡುವುದಾದರೆ ಮಲೆನಾಡಿನಲ್ಲಿ ಶೇ. 43, ಕರಾವಳಿಯಲ್ಲಿ ಶೇ. 35, ಉತ್ತರ ಒಳನಾಡಿನಲ್ಲಿ ಶೇ. 33 ಮತ್ತು ದಕ್ಷಿಣ ಒಳನಾಡಿನಲ್ಲಿ ಶೇ. 31 ರಷ್ಟು ಮಳೆ ಕೊರತೆ ಎದುರಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದ್ದು, 359.98 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 681.83 ಟಿಎಂಸಿ ನೀರಿತ್ತು ಎಂಬುದು ಪರಿಸ್ಥಿತಿಯ ಗಾಂಭೀರ್ಯವನ್ನು ತಿಳಿಸುತ್ತದೆ. ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಕೇವಲ ಸರಾಸರಿ ಶೇ. 23 ರಷ್ಟು ಮಾತ್ರ ನೀರು ಸಂಗ್ರಹವಿದ್ದರೆ, ಕಾವೇರಿ ಕಣಿವೆಯಲ್ಲಿ ಶೇ. 51 ಹಾಗೂ ಕೃಷ್ಣಾ ಕಣಿವೆಯಲ್ಲಿ ಶೇ. 48 ರಷ್ಟು ನೀರಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ರೈತರು ಕಡಿಮೆ‌ ನೀರಿನ‌ ಬಳಕೆಯಾಗುವ ಬೆಳೆಗಳನ್ನು ಬೆಳೆಯುವ ಮೂಲಕ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಈ ಮಹತ್ವದ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.