ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಹುಟ್ಟಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ವಿಡಂಬನಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಅಧಿಕೃತ ‘X’ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ದಿಢೀರನೆ ನಿರ್ಬಂಧಿಸಲಾಗಿದೆ.
ಈ ಬಗ್ಗೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದು, ಡಿಜಿಟಲ್ ವೇದಿಕೆಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾತೆ ನಿರ್ಬಂಧ ಮತ್ತು ಹ್ಯಾಕ್ ಯತ್ನ
“ನಮ್ಮ ನಿರೀಕ್ಷೆಯಂತೆಯೇ ಭಾರತದಲ್ಲಿ ಕಾಕ್ರೋಚ್ ಜನತಾ ಪಕ್ಷದ ‘X’ ಖಾತೆಯನ್ನು ತಡೆಹಿಡಿಯಲಾಗಿದೆ. ಕೇವಲ ಎಕ್ಸ್ ಮಾತ್ರವಲ್ಲದೆ, ನಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೂ ಹ್ಯಾಕ್ ಮಾಡಲು ನಿರಂತರ ಯತ್ನಗಳು ನಡೆಯುತ್ತಿವೆ” ಎಂದು ಅಭಿಜೀತ್ ದೀಪ್ಕೆ ಅವರು ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರವಷ್ಟೇ ಆರಂಭವಾಗಿದ್ದ ಈ ವಿಡಂಬನಾತ್ಮಕ ಎಕ್ಸ್ ಖಾತೆಯು, ನಿರ್ಬಂಧಕ್ಕೊಳಗಾಗುವ ಮುನ್ನ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ಭಾರತದ ರಾಜಕೀಯ ವಲಯ ಹಾಗೂ ಡಿಜಿಟಲ್ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಯುವಜನತೆ ಈ ಖಾತೆಗೆ ಅಭೂತಪೂರ್ವ ಬೆಂಬಲ ಸೂಚಿಸಿದ್ದರು.
ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಂಡಿದ್ದೇಕೆ?
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಕರ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. “ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಅವರಲ್ಲಿ ಕೆಲವರು ಮಾಧ್ಯಮಗಳಲ್ಲಿ, ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ, ಹಾಗೂ ಮತ್ಯೆಲ್ಲೋ ಕೆಲವರು ಆರ್‌ಟಿಐ (RTI) ಕಾರ್ಯಕರ್ತರಾಗಿ ಹುಟ್ಟಿಕೊಳ್ಳುತ್ತಿದ್ದಾರೆ” ಎಂದು ಅವರು ಶುಕ್ರವಾರ ಕಿಡಿಕಾರಿದ್ದರು.
ನ್ಯಾಯಮೂರ್ತಿಗಳ ಈ ‘ಜಿರಳೆ’ (Cockroach) ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಯುವಜನತೆ, ಇದನ್ನೇ ಅಸ್ತ್ರವಾಗಿಸಿಕೊಂಡು ವಿಭಿನ್ನವಾಗಿ ‘ಕಾಕ್ರೋಚ್ ಜನತಾ ಪಕ್ಷ’ವನ್ನು ಹುಟ್ಟುಹಾಕಿದ್ದರು. ಈ ಮೂಲಕ ನಿರುದ್ಯೋಗಿ ಯುವಕರ ಧ್ವನಿಯಾಗಿ ಹೊರಹೊಮ್ಮಿದ್ದ ಈ ವಿಡಂಬನಾತ್ಮಕ ಪಕ್ಷವು, ಕೇವಲ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿತ್ತು. ಆದರೆ, ಸರ್ಕಾರದ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಈ ಪಕ್ಷದ ಮುಖವಾಣಿಯಾಗಿದ್ದ ಎಕ್ಸ್ ಖಾತೆಗೆ ಇದೀಗ ಬ್ರೇಕ್ ಹಾಕಲಾಗಿದೆ.
