ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕಾವು ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಪರವಾಗಿ ಮುಸ್ಲಿಂ ಮತಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರ ಮೇಲೆ ತೀವ್ರ ಒತ್ತಡ ನಿರ್ಮಾಣವಾಗಿತ್ತು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಡುವೆ ತೀವ್ರ ಮುಸುಕಿನ ಗುದ್ದಾಟ ನಡೆದಿತ್ತು. ಈ ವೇಳೆ ಜಮೀರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಮಲ್ಲಿಕಾರ್ಜುನ, ಕ್ಷೇತ್ರಕ್ಕೆ ಬರುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮಲ್ಲಿಕಾರ್ಜುನ ಅವರ ಈ ಹೇಳಿಕೆಯು ಮುಸ್ಲಿಂ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಜಮೀರ್ ಅವರ ಬಳಿ ಮಲ್ಲಿಕಾರ್ಜುನ ಕ್ಷಮೆಯಾಚಿಸಬೇಕು ಎಂದು ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದರು. ಇತ್ತ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ ಹಾಗೂ ಮಲ್ಲಿಕಾರ್ಜುನ ಅವರ ಅವಹೇಳನಕಾರಿ ಮಾತುಗಳಿಂದ ತೀವ್ರ ಬೇಸರಗೊಂಡಿದ್ದ ಜಮೀರ್, ದಾವಣಗೆರೆ ಉಪಚುನಾವಣಾ ಪ್ರಚಾರದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದರು.
ಜಮೀರ್ ಗೈರಿನಲ್ಲಿ ಶಾಸಕರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್ ಹಾಗೂ ಯಾಸೀನ್ ಖಾನ್ ಪಠಾಣ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ, ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಮುಸ್ಲಿಂ ಸಮುದಾಯದ ಜನರು, ಜಮೀರ್ ಅವರನ್ನು ಕರೆಯಿಸಿ ಎಂದು ಘೋಷಣೆ ಕೂಗಿದ್ದು ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕ ಎದುರಾದ ಹಿನ್ನೆಲೆಯಲ್ಲಿ, ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ದಾವಣಗೆರೆಗೆ ತೆರಳಿ ಪ್ರಚಾರ ನಡೆಸುವಂತೆ ಜಮೀರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಇಂದು (ಏಪ್ರಿಲ್ 5) ದಾವಣಗೆರೆ ದಕ್ಷಿಣ ಕ್ಷೇತ್ರದ ಅಖಾಡಕ್ಕಿಳಿದಿರುವ ಜಮೀರ್ ಅಹಮ್ಮದ್ ಖಾನ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಇದೇ ವೇಳೆ ಮಲ್ಲಿಕಾರ್ಜುನ ಅವರು ಬೈದಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್, ಮಲ್ಲಿಕಾರ್ಜುನ ಅವರು ನನ್ನ ಅಣ್ಣ ಇದ್ದಂತೆ, ಯಾವುದೋ ಸಿಟ್ಟಿನಲ್ಲಿ ಏನೋ ಬೈದಿದ್ದಾರೆ ಬಿಡಿ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಮೇಲಿದ್ದ ಮುನಿಸನ್ನು ಮರೆತು ಮಲ್ಲಿಕಾರ್ಜುನ ಅವರ ಪುತ್ರನ ಗೆಲುವಿಗಾಗಿ ಜಮೀರ್ ಪ್ರಚಾರ ಕಣಕ್ಕೆ ಧುಮುಕಿದ್ದಾರೆ.
