ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಡೆಹ್ರಾಡೂನ್‌ನ ನಂದಾ ಕಿ ಚೌಕಿ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಬೃಹತ್ ಕುಳಿ ಬಿದ್ದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿಂದೆ ಪ್ರವಾಹಕ್ಕೆ ಸಿಲುಕಿ ನಾಶವಾಗಿದ್ದ ಸೇತುವೆಯ ಜಾಗದಲ್ಲಿಯೇ ಬರೋಬ್ಬರಿ 16 ಕೋಟಿ ರೂ. ವೆಚ್ಚದಲ್ಲಿ ಈ ಹೊಸ ಸೇತುವೆಯನ್ನು ಮರುನಿರ್ಮಾಣ ಮಾಡಲಾಗಿತ್ತು. 200 ಮಿ.ಮೀ.ಗೂ ಅಧಿಕ ಮಳೆಯಾದ ಪರಿಣಾಮ ಉಕ್ಕಿ ಹರಿದ ನೀರಿನ ರಭಸಕ್ಕೆ ಸಂಪರ್ಕ ರಸ್ತೆ ಕುಸಿದಿದೆ.
ಸೇತುವೆ ಸುರಕ್ಷಿತ, ದುರಸ್ತಿ ಕಾರ್ಯ ಚುರುಕು
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಜಿಲ್ಲಾಧಿಕಾರಿ ಆಶಿಶ್ ಚೌಹಾಣ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸೇತುವೆಯ ಮುಖ್ಯ ಭಾಗ (ಡೆಕ್) ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಾಹನ ಸಂಚಾರವನ್ನು ಸುಗಮಗೊಳಿಸಲು ದುರಸ್ತಿ ಕಾರ್ಯವು ಭರದಿಂದ ಸಾಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ರಸ್ತೆಯನ್ನು ಮತ್ತೆ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ನೀಡಿದ್ದಾರೆ.
ಗುತ್ತಿಗೆದಾರರು, ಅಧಿಕಾರಿಗಳ ಹೊಣೆಗಾರಿಕೆಗೆ ಆಗ್ರಹ
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸೇತುವೆಯ ಸಂಪರ್ಕ ರಸ್ತೆ ಇಷ್ಟು ಬೇಗ ಕುಸಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಂತರ್ಜಾಲದಲ್ಲಿ ಹಾಗೂ ಸ್ಥಳೀಯವಾಗಿ ನಿರ್ಮಾಣದ ಗುಣಮಟ್ಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಕಳಪೆ ಕಾಮಗಾರಿಗೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
