ಕಾರ್ಪೊರೇಟ್ ಜಗತ್ತಿನಲ್ಲಿ ಟಾರ್ಗೆಟ್, ಒತ್ತಡಗಳೇ ತುಂಬಿರುವ ಈ ಕಾಲದಲ್ಲಿ, ದೆಹಲಿ ಮೂಲದ ಪಿಆರ್ (PR) ಸಂಸ್ಥೆಯೊಂದರ ಸಿಇಒ ತಮ್ಮ ಉದ್ಯೋಗಿಗಳಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ತಾಯಂದಿರ ದಿನದ (Mother’s Day) ಹಿನ್ನೆಲೆಯಲ್ಲಿ, ಪೋಷಕರ ನಿಸ್ವಾರ್ಥ ತ್ಯಾಗವನ್ನು ಸ್ಮರಿಸಿರುವ ಸಿಇಒ ರಜತ್ ಗ್ರೋವರ್ ಅವರು, ತಮ್ಮ ಪೋಷಕರನ್ನು 3 ದಿನಗಳ ಪ್ರವಾಸಕ್ಕೆ ಕರೆದೊಯ್ಯಲು ಉದ್ಯೋಗಿಗಳಿಗೆ ತಲಾ ₹10,000 ಮರುಪಾವತಿ ಹಾಗೂ 3 ದಿನಗಳ ಹೆಚ್ಚುವರಿ ವೇತನ ಸಹಿತ ರಜೆಯನ್ನು ಘೋಷಿಸಿದ್ದಾರೆ.
ಈ ವಿಶೇಷ ರಜೆಯು ಉದ್ಯೋಗಿಗಳ ಸಾಮಾನ್ಯ ರಜೆಗಳ (PTO) ಖಾತೆಯಿಂದ ಕಡಿತಗೊಳ್ಳುವುದಿಲ್ಲ ಎಂಬುದು ಇದರ ಮತ್ತೊಂದು ವಿಶೇಷ. ಸಿಇಒ ಅವರ ಈ ನಡೆಯು ಆನ್ಲೈನ್ನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದು, ನಾಯಕತ್ವದ ‘ಮಾನವೀಯ’ ಮುಖವನ್ನು ಅನಾವರಣಗೊಳಿಸಿದೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ‘ಎಲೈಟ್ ಮಾರ್ಕ್’ (Elite Marque) ಸಂಸ್ಥೆಯ ಸಿಇಒ ರಜತ್ ಗ್ರೋವರ್, ನಮಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರಿಗೆ ನಾವು ಯಾವಾಗಲೂ ‘ಒಂದಲ್ಲಾ ಒಂದು ದಿನ’ ಎಂದು ಹೇಳುತ್ತಲೇ ಇರುತ್ತೇವೆ. ನಮ್ಮ ಪೋಷಕರು ನಮ್ಮಿಂದ ಏನನ್ನೂ ನಿರೀಕ್ಷಿಸದೆ ತಮ್ಮ ಸಮಯ, ಕನಸುಗಳು ಮತ್ತು ಯೌವನವನ್ನು ಧಾರೆ ಎರೆದಿದ್ದಾರೆ. ಹೀಗಿರುವಾಗ, “ನೀವು ಯಾವಾಗಲೂ ಮಾಡಲು ಬಯಸಿದ್ದೇನು?” ಎಂದು ಅವರನ್ನು ಕೇಳುವ ಹಾಗೂ ಆ ಆಸೆಯನ್ನು ಈಡೇರಿಸುವ ಸಮಯ ಈಗ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ನಾನು ಈ ಕಂಪನಿಯನ್ನು ಕಟ್ಟುವ ಮುನ್ನ, ನನಗಾಗಿ ಬೆಳಿಗ್ಗೆ 5 ಗಂಟೆಗೆ ಎದ್ದು, ನನ್ನ ಕನಸುಗಳನ್ನು ನನಸು ಮಾಡಲು ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿದವರಿದ್ದಾರೆ. ಅವರೊಂದಿಗೆ ಕಳೆಯಲು ನಮಗೆ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ನಾಳೆಯ ಬಗ್ಗೆ ಯಾರಿಗೂ ಖಚಿತತೆಯಿಲ್ಲ. ಹಾಗಾಗಿ ಅವರು ಹೋಗಲು ಬಯಸಿದ್ದ ಸ್ಥಳ ಅಥವಾ ಕಳೆಯಲು ಬಯಸಿದ್ದ ಕ್ಷಣಗಳಿದ್ದರೆ, ಅದಕ್ಕೆ ಇದೇ ಸರಿಯಾದ ಸಮಯ. ಕಾಯಬೇಡಿ, ಈಗಲೇ ಅವರನ್ನು ಕರೆದುಕೊಂಡು ಹೋಗಿ ಎಂದು ಗ್ರೋವರ್ ತಮ್ಮ ಸಿಬ್ಬಂದಿಗೆ ಕಿವಿಮಾತು ಹೇಳಿದ್ದಾರೆ. ನಾವು ಏನನ್ನಾದರೂ ಸಾಧಿಸುವ ಮುನ್ನವೇ ನಮ್ಮ ವಿಶ್ವಾಸ, ಮೌಲ್ಯಗಳು ಮತ್ತು ಶಕ್ತಿಯನ್ನು ಕಟ್ಟಿದವರು ನಮ್ಮ ಪೋಷಕರು ಎಂದು ಅವರು ಸ್ಮರಿಸಿದ್ದಾರೆ.
ಇದು ಕೇವಲ ಬೋನಸ್ ಅಥವಾ ಪ್ರಚಾರದ ವಿಷಯವಲ್ಲ, ಇದು ನಮ್ಮ ಪೋಷಕರಿಗೆ ಸಮಯ ಮೀಸಲಿಡುವ ಪ್ರಾಮಾಣಿಕ ಪ್ರಯತ್ನ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಿಇಒ ಅವರ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಡೀ ಜಗತ್ತು ಈ ರೀತಿ ಯೋಚಿಸಲು ಪ್ರಾರಂಭಿಸಿದರೆ ಎಷ್ಟು ಚೆನ್ನಾಗಿರುತ್ತದೆ, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಇಂತಹ ಮನಸ್ಥಿತಿ ಹೊಂದಿರುವ ಜನರನ್ನು ಹುಡುಕುವುದು ಕಷ್ಟ, ಇದೊಂದು ಅತ್ಯುತ್ತಮ ಉಪಕ್ರಮ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.
