S Shorts

ಧಾರವಾಡ ಬಳಿ ಭೀಕರ ರಸ್ತೆ ಅಪಘಾತ: ದಾವಣಗೆರೆ ಮೂಲದ ಮೂವರ ದುರ್ಮರಣ!

ಧಾರವಾಡ ಬಳಿ ಭೀಕರ ರಸ್ತೆ ಅಪಘಾತ: ದಾವಣಗೆರೆ ಮೂಲದ ಮೂವರ ದುರ್ಮರಣ!
Author: Sagaradventure
Posted By: Sagaradventure
Updated: Sep 1, 2026 | 11:04 AM

ಧಾರವಾಡ ಜಿಲ್ಲೆಯ ವೆಂಕಟಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (NH-4) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಪಲ್ಟಿಯಾಗಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

ಮಧ್ಯರಾತ್ರಿ ಸಂಭವಿಸಿದ ದುರಂತ 

ಮೃತಪಟ್ಟ ಯುವಕರನ್ನು ದಾವಣಗೆರೆ ಮೂಲದ ವಿನಾಯಕ ಕೆ.ಯು. (25), ಮಂಜುನಾಥ (29) ಹಾಗೂ ಬಸವರಾಜ (34) ಎಂದು ಗುರುತಿಸಲಾಗಿದೆ. ಇವರು ಕೇಟರಿಂಗ್ ಕೆಲಸದ ನಿಮಿತ್ತ ಧಾರವಾಡಕ್ಕೆ ಆಗಮಿಸಿದ್ದರು. ಸೋಮವಾರ ಮಧ್ಯರಾತ್ರಿ ಸುಮಾರು 2:30ರ ಹೊತ್ತಿಗೆ ಕೆಲಸ ಮುಗಿಸಿ, ಧಾರವಾಡ ಹೊರವಲಯದ ಡಾಬಾವೊಂದರಲ್ಲಿ ಊಟ ಮುಗಿಸಿಕೊಂಡು ಕಾರಿನಲ್ಲಿ ನಗರಕ್ಕೆ ಮರಳುತ್ತಿದ್ದರು. ಈ ವೇಳೆ ಎದುರಿನಿಂದ ಏಕಾಏಕಿ ಬಂದ ಲಾರಿಯನ್ನು ತಪ್ಪಿಸುವ ಭರದಲ್ಲಿ ಕಾರು ಚಾಲಕ ಬಸವನಗೌಡ ಅವರು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ (ಡಿವೈಡರ್) ವೇಗದಲ್ಲಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕಣ್ಣೀರು ಹಾಕಿದ ಚಾಲಕ, ತನಿಖೆ ಚುರುಕು 

ಘಟನೆಯಲ್ಲಿ ಮೂವರು ಯುವಕರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ, ಚಾಲಕ ಸೇರಿ ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. “ನಮ್ಮನ್ನು ಆಸ್ಪತ್ರೆಗೆ ಕರೆತಂದ ಬಳಿಕವೇ ಸಹೋದ್ಯೋಗಿಗಳು ಮೃತಪಟ್ಟ ವಿಚಾರ ನನಗೆ ತಿಳಿಯಿತು” ಎಂದು ಗಾಯಗೊಂಡಿರುವ ಕಾರು ಚಾಲಕ ಬಸವನಗೌಡ ಕಣ್ಣೀರು ಹಾಕಿದ್ದಾರೆ. ಈ ಭೀಕರ ಅಪಘಾತದ ಕುರಿತು ಗರಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.