S Shorts

ಶಿಕ್ಷಣ ಸಚಿವರೇ ಇಲ್ಲಿ ನೋಡಿ: 5 ಲಕ್ಷಕ್ಕೆ ‘PhD’ ಸೇಲ್! ಸರ್ಕಾರಿ ಹುದ್ದೆಗೆ ನಕಲಿ Certificate ದಂಧೆ ಬಟಾಬಯಲು!!

ಶಿಕ್ಷಣ ಸಚಿವರೇ ಇಲ್ಲಿ ನೋಡಿ: 5 ಲಕ್ಷಕ್ಕೆ ‘PhD’ ಸೇಲ್! ಸರ್ಕಾರಿ ಹುದ್ದೆಗೆ ನಕಲಿ Certificate ದಂಧೆ ಬಟಾಬಯಲು!!
Author: Sagaradventure
Posted By: Sagaradventure
Updated: Jan 23, 2026 | 9:38 AM

ಕಲಬುರಗಿ: ರಾಜ್ಯದ ಉನ್ನತ ಶಿಕ್ಷಣ ಸಚಿವರು ಬೆಚ್ಚಿಬೀಳುವಂತಹ, ಶಿಕ್ಷಣ ಪ್ರೇಮಿಗಳು ತಲೆತಗ್ಗಿಸುವಂತಹ ಸ್ಫೋಟಕ ಹಗರಣವೊಂದು ಬಯಲಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬೋಧಿಸಬೇಕಾದ ಉಪನ್ಯಾಸಕರೇ ಅಡ್ಡದಾರಿ ಹಿಡಿದಿದ್ದು, ಹಣ ಕೊಟ್ಟರೆ ಸಾಕು ಮನೆ ಬಾಗಿಲಿಗೆ ‘ಪಿಎಚ್‌ಡಿ ಸರ್ಟಿಫಿಕೇಟ್’ (PhD Certificate) ತಲುಪಿಸುವ ಬೃಹತ್ ಜಾಲವೊಂದು ಖಾಸಗಿ ಸುದ್ದಿವಾಹಿನಿಯೊಂದರ ತನಿಖೆಯಲ್ಲಿ ಸಾಕ್ಷ್ಯಾಧಾರ ಸಮೇತ ಸಿಕ್ಕಿಬಿದ್ದಿದೆ.

5 ರಿಂದ 7 ಲಕ್ಷಕ್ಕೆ ‘ಡಾಕ್ಟರೇಟ್’ ಬಿಕರಿ!

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಪಡೆಯಲು ಕೆ-ಸೆಟ್, ನೆಟ್ ಅಥವಾ ಪಿಎಚ್‌ಡಿ ಪದವಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂಧೆಕೋರರು, 5 ರಿಂದ 7 ಲಕ್ಷ ರೂಪಾಯಿ ನೀಡಿದರೆ ಸಾಕು, ಯಾವುದೇ ಅಧ್ಯಯನವಿಲ್ಲದೆ 6 ತಿಂಗಳಲ್ಲೇ ಪಿಎಚ್‌ಡಿ ಪದವಿ ಕೊಡಿಸುವ ಆಮಿಷವೊಡ್ಡುತ್ತಿದ್ದಾರೆ. ಏಜೆಂಟ್ ಶರಣಗೌಡ ಪಾಟೀಲ್ ಎಂಬಾತ ಉಪನ್ಯಾಸಕರೊಬ್ಬರ ಬಳಿ 4.30 ಲಕ್ಷ ರೂ.ಗೆ ಡೀಲ್ ಕುದುರಿಸುತ್ತಿರುವ ಆಡಿಯೋ ಮತ್ತು “ಎಲ್ಲಾ ಒರಿಜಿನಲ್ ತರಾನೇ ಇರುತ್ತೆ, ಫೇಕ್ ಅನ್ನಿಸೋದೇ ಇಲ್ಲ” ಎಂದು ಅಭಯ ನೀಡುವ ಮಾತುಗಳು ಈ ದಂಧೆಯ ಕರಾಳತೆಯನ್ನು ಬಯಲು ಮಾಡಿವೆ.

ಹೊರರಾಜ್ಯದ ವಿವಿಗಳ ಹೆಸರಲ್ಲಿ ಮಹಾ ಮೋಸ

ಈ ದಂಧೆಯ ಜಾಡು ಅರುಣಾಚಲ ಪ್ರದೇಶದ ಅರುಣೋದಯ ವಿವಿ, ಉತ್ತರ ಪ್ರದೇಶದ ಚೌಧರಿ ಚರಣ್ ಸಿಂಗ್ ವಿವಿ, ಬಿಹಾರದ ಮಗಧ ವಿವಿ, ತಮಿಳುನಾಡಿನ ಅಣ್ಣಾಮಲೈ ವಿವಿ ಹಾಗೂ ದೆಹಲಿಯ ಮೊನಾಡ್ ವಿವಿಗಳವರೆಗೂ ಚಾಚಿಕೊಂಡಿದೆ. ವಿಚಿತ್ರವೆಂದರೆ, ಕನ್ನಡ ವಿಭಾಗವೇ ಇಲ್ಲದ ಹೊರರಾಜ್ಯದ ವಿವಿಗಳಿಂದ ‘ಕನ್ನಡ ವಿಷಯ’ದಲ್ಲಿ ಪಿಎಚ್‌ಡಿ ಪಡೆದ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಹಾವಳಿ ಮಿತಿಮೀರಿದ್ದು, ಸಿಂಧನೂರು ಮತ್ತು ದೇವದುರ್ಗದ ಸರ್ಕಾರಿ ಕಾಲೇಜುಗಳಲ್ಲಿ ನಕಲಿ ದಾಖಲೆ ನೀಡಿ ಹಲವರು ಈಗಾಗಲೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಉಪನ್ಯಾಸಕ ಫಿರೋಜ್ ರಾವ್ ಗಾಯಕವಾಡ್ ಅವರು ಈ ಅಕ್ರಮವನ್ನು ದಾಖಲೆ ಸಮೇತ ಹೊರಗೆಳೆದಿದ್ದಾರೆ. ಸಿದ್ದಪ್ಪ, ನಲ್ಲರೆಡ್ಡಿ, ನರಸಪ್ಪ, ಚಂದ್ರಶೇಖರ್ ಸೇರಿದಂತೆ 6ಕ್ಕೂ ಹೆಚ್ಚು ಉಪನ್ಯಾಸಕರು ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂಬ ಆರೋಪವಿದೆ. ಅಣ್ಣಾಮಲೈ ವಿವಿಗೆ ‘NAAC A+’ ಮಾನ್ಯತೆ ಇದ್ದರೆ, ನಕಲಿ ಸರ್ಟಿಫಿಕೇಟ್‌ನಲ್ಲಿ ಹಳೆಯ ‘A’ ಗ್ರೇಡ್ ಎಂದು ಮುದ್ರಿಸಲಾಗಿದೆ. ಇನ್ನು ಬಸವರಾಜ್ ಪಾಟೀಲ್ ಎಂಬುವರು ಸಲ್ಲಿಸಿದ ಮೊನಾಡ್ ವಿವಿ ಪ್ರಮಾಣಪತ್ರದಲ್ಲಿ ವಿವಿ ಹೆಸರಿಗೂ, ಸಹಿಗೂ ತಾಳಮೇಳವಿಲ್ಲ. ಕಾಲೇಜಿನ ಪ್ರಾಂಶುಪಾಲರು ಮತ್ತು ಅತಿಥಿ ಉಪನ್ಯಾಸಕರು ಶಾಮೀಲಾಗಿ ನಡೆಸುತ್ತಿರುವ ಈ ಕೃತ್ಯದ ವಿರುದ್ಧ ಶಿಕ್ಷಣ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂಬ ಒತ್ತಾಯ ಕೇಳಿಬಂದಿದೆ.