S Shorts

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೂ ಇನ್ಮುಂದೆ ಹಣ ನೀಡಬೇಕಾ? ಧರಣಿ ಜಾಗದಲ್ಲಿ GBAಯಿಂದ ವಾಣಿಜ್ಯ ಬಳಕೆಯ ಪ್ಲಾನ್

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೂ ಇನ್ಮುಂದೆ ಹಣ ನೀಡಬೇಕಾ? ಧರಣಿ ಜಾಗದಲ್ಲಿ GBAಯಿಂದ ವಾಣಿಜ್ಯ ಬಳಕೆಯ ಪ್ಲಾನ್
Author: Sagaradventure
Posted By: Sagaradventure
Updated: Aug 27, 2026 | 11:26 AM

ಬೆಂಗಳೂರಿನಲ್ಲಿ ಜನಸಾಮಾನ್ಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಲು ಮೀಸಲಾಗಿರುವ ಏಕೈಕ ಜಾಗವಾದ ಫ್ರೀಡಂ ಪಾರ್ಕ್ ಅನ್ನು ಇದೀಗ ವಾಣಿಜ್ಯ ಬಳಕೆಗೆ ಬಳಸಿಕೊಳ್ಳಲು ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಮುಂದಾಗಿದೆ. ಆದಾಯ ಕೊರತೆ ನೀಗಿಸುವ ನೆಪದಲ್ಲಿ ಪ್ರತಿಭಟನಾ ವೇದಿಕೆಯಲ್ಲೂ ವ್ಯಾಪಾರ ಮಾಡಲು ಪಾಲಿಕೆ ಅಧಿಕಾರಿಗಳು ಹೊರಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಫ್ರೀಡಂ ಪಾರ್ಕ್ ಆವರಣದಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ ಬರೋಬ್ಬರಿ 1 ಲಕ್ಷ ರೂಪಾಯಿ ಬಾಡಿಗೆ ನಿಗದಿಪಡಿಸುವ ಬಗ್ಗೆ ಜಿಬಿಎ ಯೋಜನೆ ರೂಪಿಸಿದೆ ಎನ್ನಲಾಗಿದೆ. ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶವಿರುವ ಏಕೈಕ ಜಾಗವನ್ನು ಈ ರೀತಿ ಹಣ ಸಂಪಾದನೆಗೆ ಬಳಸಿಕೊಳ್ಳಲು ಕೈಹಾಕಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳ ದಮನ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಬಿಎ ಮುಖ್ಯ ಆಯುಕ್ತರ ಈ ವಾಣಿಜ್ಯ ಬಳಕೆಯ ಪ್ಲಾನ್ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಎದ್ದಿದೆ.

ಜನಸಾಮಾನ್ಯರ ಧ್ವನಿಗಿಂತ ಆಡಳಿತ ವ್ಯವಸ್ಥೆಗೆ ದುಡ್ಡೇ ದೊಡ್ಡದಾಯಿತೇ ಎಂದು ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಕೂರಲೂ ಲಕ್ಷಾಂತರ ರೂಪಾಯಿ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಬಡವರು, ಕಾರ್ಮಿಕರು ಮತ್ತು ಶ್ರಮಿಕ ವರ್ಗದವರು ತಮ್ಮ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರುವುದು ಹೇಗೆ ಎಂಬ ಆತಂಕ ಶುರುವಾಗಿದೆ. ಜಿಬಿಎ ಅಧಿಕಾರಿಗಳ ಈ ಹಣದ ಆಟಕ್ಕೆ ವಿವಿಧ ಸಂಘಟನೆಗಳು ಹಾಗೂ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕೂಡಲೇ ಈ ನಿರ್ಧಾರವನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.