ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿಯ ಒಂಟಿ ಮನೆಯೊಂದರಲ್ಲಿ ತಡರಾತ್ರಿ ಭಾರಿ ದರೋಡೆ ನಡೆದಿದೆ. ಮಂಜೇಗೌಡ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರ ತಂಡವೊಂದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದೆ.
ಕುಟುಂಬಸ್ಥರನ್ನು ಕಟ್ಟಿಹಾಕಿ ಮಾರಕಾಸ್ತ್ರಗಳ ಬೆದರಿಕೆ
ತಡರಾತ್ರಿ 1.30 ರ ಸುಮಾರಿಗೆ ಕುಟುಂಬಸ್ಥರೆಲ್ಲರೂ ಮಲಗಿದ್ದಾಗ ಮನೆಯ ಹಿಂಬಾಗಿಲು ಒಡೆದು ದುಷ್ಕರ್ಮಿಗಳು ಒಳನುಗ್ಗಿದ್ದಾರೆ. ಎಚ್ಚರಗೊಂಡ ಮನೆಯವರು ಯಾರೂ ಕೂಗಾಡದಂತೆ ಚಾಕು, ಮಚ್ಚು ಹಾಗೂ ಲಾಂಗ್‌ಗಳನ್ನು ತೋರಿಸಿ ಪ್ರಾಣಬೆದರಿಕೆ ಹಾಕಿದ್ದಾರೆ. ಮಂಜೇಗೌಡ ಅವರ ಪತ್ನಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಂಜೇಗೌಡ ಅವರ ಪುತ್ರನ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಲು ಯತ್ನಿಸಿ ಬೆದರಿಸಿದ್ದಾರೆ. ಆ ಬಳಿಕ ಮನೆಯ ಎಲ್ಲ ಸದಸ್ಯರನ್ನೂ ಒಂದು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ.
60 ಗ್ರಾಂ ಚಿನ್ನ, 25 ಸಾವಿರ ನಗದು ದರೋಡೆ
ಕುಟುಂಬಸ್ಥರನ್ನು ಕೂಡಿಹಾಕಿದ ಬಳಿಕ ಮನೆಯಲ್ಲಿದ್ದ ಸುಮಾರು 60 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಈ ಆಘಾತಕಾರಿ ಘಟನೆಯು ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
