ಬೆಂಗಳೂರು: ಪ್ರವಾಸಿಗರ ಸುರಕ್ಷತೆ ಮತ್ತು ಗುಣಮಟ್ಟದ ಸೇವೆಗೆ ಹೆಚ್ಚಿನ ಒತ್ತು ನೀಡಿರುವ ರಾಜ್ಯ ಸರ್ಕಾರ, ಕರ್ನಾಟಕದಲ್ಲಿ ಹೋಂಸ್ಟೇಗಳ (Homestay) ಅಧಿಕೃತ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದ್ದು, ನೋಂದಣಿ ಮಾಡಿಕೊಳ್ಳದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳಿಗೆ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ದಾಖಲೆ ಮತ್ತು ಸ್ಥಳ ಪರಿಶೀಲನೆ ಕಡ್ಡಾಯ
ಸರ್ಕಾರದ ಆದೇಶದ ಬೆನ್ನಲ್ಲೇ ಈಗಾಗಲೇ 500ಕ್ಕೂ ಅಧಿಕ ಹೋಂಸ್ಟೇಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಿವೆ. ಈ ಪೈಕಿ 400ಕ್ಕೂ ಹೆಚ್ಚು ಅರ್ಜಿಗಳ ದಾಖಲೆಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಕೇವಲ ದಾಖಲೆಗಳ ಆಧಾರದ ಮೇಲೆ ಮಾನ್ಯತೆ ನೀಡದೆ, ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ನೋಂದಣಿ ಪ್ರಮಾಣಪತ್ರ ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ನಿಗದಿತ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ಯಾವುದೇ ಕಾರಣಕ್ಕೂ ಮಾನ್ಯತೆ ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
45 ದಿನಗಳಲ್ಲಿ ಪ್ರಮಾಣಪತ್ರ, 5 ವರ್ಷದ ಮಾನ್ಯತೆ
ಮಾನದಂಡಗಳನ್ನು ಪಾಲಿಸುವ ಅರ್ಹ ಹಾಗೂ ನೈಜ ಹೋಂಸ್ಟೇಗಳಿಗೆ ಮಾತ್ರ ಸರ್ಕಾರದ ಅಧಿಕೃತ ಮಾನ್ಯತೆ ಸಿಗಲಿದೆ. ಅರ್ಜಿ ಸಲ್ಲಿಸಿ, ಸ್ಥಳ ಪರಿಶೀಲನೆಗೊಂಡ 45 ದಿನಗಳೊಳಗೆ ನೋಂದಣಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಒಮ್ಮೆ ನೀಡಲಾದ ನೋಂದಣಿ ಪ್ರಮಾಣಪತ್ರವು ಮುಂದಿನ 5 ವರ್ಷಗಳ ಕಾಲ ಮಾನ್ಯತೆ ಹೊಂದಿರಲಿದೆ. ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ಕೂಡಲೇ ಅಧಿಕೃತವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಕರೆ ನೀಡಿದೆ.
