S Shorts

Mangaluru ಹೊರವಲಯದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಭಾರಿ ಗುಡ್ಡ ಕುಸಿತ: ಪಾದೂರು ಕಚ್ಚಾ ತೈಲ ಪೈಪ್‌ಲೈನ್‌ಗೆ ಕುತ್ತು!

Mangaluru ಹೊರವಲಯದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಭಾರಿ ಗುಡ್ಡ ಕುಸಿತ: ಪಾದೂರು ಕಚ್ಚಾ ತೈಲ ಪೈಪ್‌ಲೈನ್‌ಗೆ ಕುತ್ತು!
Author: Sagaradventure
Posted By: Sagaradventure
Updated: Jul 4, 2026 | 10:04 AM

ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಬಾಳದ ಒಟ್ಟೆಕಾಯರ್ ಗ್ರಾಮದಲ್ಲಿ ಭಾರಿ ಗುಡ್ಡ ಕುಸಿತ ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಗುಡ್ಡದ ಕೆಳಭಾಗದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ, ಅತ್ಯಂತ ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದೇ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಗುಡ್ಡದ ಕೆಳಭಾಗದಲ್ಲಿರುವ ಗೋಡೌನ್ ಜಾಗ ವಿಸ್ತರಣೆಗಾಗಿ ಈ ರೀತಿ ಮಣ್ಣು ಅಗೆಯಲಾಗಿದೆ. ಈ ಗೋಡೌನ್ ಪುತ್ತೂರು ಕಾಂಗ್ರೆಸ್ ಶಾಸಕರಿಗೆ ಸೇರಿದ್ದು ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

ಅಪಾಯದ ಅಂಚಿನಲ್ಲಿ ಕಚ್ಚಾ ತೈಲ ಪೈಪ್‌ಲೈನ್

​ಈ ಗುಡ್ಡ ಕುಸಿತದಿಂದಾಗಿ ದೇಶದ ಅತೀ ದೊಡ್ಡ ತೈಲ ಸಂಗ್ರಹಕಾರವಾದ ಪಾದೂರು ತೈಲ ಸಂಗ್ರಹಕಾರದ ಕಚ್ಚಾ ತೈಲ ಪೈಪ್‌ಲೈನ್ ಭಾರಿ ಅಪಾಯಕ್ಕೆ ಸಿಲುಕಿದೆ. ಒಟ್ಟೆಕಾಯರ್ ಪ್ರದೇಶದಲ್ಲಿ ಹಾದುಹೋಗಿರುವ ಈ ಪೈಪ್‌ಲೈನ್ ಕೆಳಭಾಗದಲ್ಲೇ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗಿದೆ. ಒಂದು ವೇಳೆ ಮಣ್ಣು ಮತ್ತಷ್ಟು ಸಡಿಲಗೊಂಡು ಈ ಪೈಪ್‌ಲೈನ್ ಕುಸಿದು ಬಿದ್ದಲ್ಲಿ, ಇಡೀ ಪ್ರದೇಶದಲ್ಲಿ ಊಹಿಸಲಾಗದಷ್ಟು ಭಾರಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿಯಿದೆ.

ಕಡಿತಗೊಳ್ಳುವ ಭೀತಿಯಲ್ಲಿ ಗ್ರಾಮದ ಸಂಪರ್ಕ ರಸ್ತೆ

​ಗುಡ್ಡ ಕುಸಿತದಿಂದ ಕೇವಲ ತೈಲ ಪೈಪ್‌ಲೈನ್ ಮಾತ್ರವಲ್ಲದೆ, ಒಟ್ಟೆಕಾಯರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯೂ ಸಂಪೂರ್ಣವಾಗಿ ಅಪಾಯದ ಅಂಚಿನಲ್ಲಿದೆ. ಈ ರಸ್ತೆಯನ್ನು ನಂಬಿಕೊಂಡು ಸುಮಾರು ಎಂಬತ್ತು ಮನೆಗಳ ನಿವಾಸಿಗಳು ನಿತ್ಯ ಸಂಚರಿಸುತ್ತಿದ್ದಾರೆ. ಮಳೆಯಿಂದಾಗಿ ರಸ್ತೆ ಮತ್ತಷ್ಟು ಕುಸಿದರೆ ಇಡೀ ಗ್ರಾಮದ ಸಂಪರ್ಕವೇ ಕಡಿತಗೊಳ್ಳುವ ಆತಂಕವನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ.

ಅಧಿಕಾರಿಗಳು ಹಾಗೂ ಶಾಸಕರ ಭೇಟಿ

​ಘಟನೆಯ ಗಂಭೀರತೆ ಅರಿತು ಮಂಗಳೂರು ಉಪ ವಿಭಾಗಾಧಿಕಾರಿ (AC) ಮೀನಾಕ್ಷಿ ಆರ್ಯಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತಂಕಿತ ಗ್ರಾಮಸ್ಥರು ತಮಗೊದಗಿರುವ ಅಪಾಯ ಹಾಗೂ ಅವೈಜ್ಞಾನಿಕ ಕಾಮಗಾರಿಯ ಕುರಿತು ಅಧಿಕಾರಿಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರ ಜೊತೆಗೆ, ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸಹ ಗುಡ್ಡ ಕುಸಿತಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.