ರಾಜಸ್ಥಾನ: ರಾಜಸ್ಥಾನದ (Rajasthan) ಜೋಧ್‌ಪುರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 18 ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ಈ ದುರಂತ ಭಾರತ್ ಮಾಲಾ ಎಕ್ಸ್‌ಪ್ರೆಸ್‌ವೇಯಲ್ಲಿ, ಫಲೋಡಿ ತಾಲ್ಲೂಕಿನ ಮಾತೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ಭಕ್ತರನ್ನು ಕರೆದೊಯ್ಯುತ್ತಿದ್ದ ಟೆಂಪೋ ಮತ್ತು ವೇಗವಾಗಿ ಬರುತ್ತಿದ್ದ ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸ್ಥಳದಲ್ಲೇ ಹಲವು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಸ್ಥಳದಲ್ಲಿಯೇ ಶವಗಳನ್ನು ತೆರವುಗೊಳಿಸಿ ಗುರುತಿಸುವ ಕಾರ್ಯ ನಡೆಯುತ್ತಿದೆ.
ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan Lal Sharma)ಈ ದುರ್ಘಟನೆಯ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
