ಬೆಂಗಳೂರಿನ ಲಾಲ್ ಬಾಗ್ ಮುಖ್ಯರಸ್ತೆಯಲ್ಲಿರುವ ಹಾಗೂ ಸಿನಿ ಪ್ರೇಕ್ಷಕರ ಅಚ್ಚುಮೆಚ್ಚಿನ ಹಾಟ್ ಸ್ಪಾಟ್ ಆಗಿದ್ದ ಐಕಾನಿಕ್ ‘ಊರ್ವಶಿ’ ಚಿತ್ರಮಂದಿರ ಇನ್ನು ಮುಂದೆ ನೆನಪು ಮಾತ್ರ. 55 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದ ಈ ಪ್ರತಿಷ್ಠಿತ ಥಿಯೇಟರ್ ಇದೀಗ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೆಲಸಮಗೊಳ್ಳುತ್ತಿದ್ದು, ಸೋಮವಾರದಿಂದಲೇ ಡೆಮಾಲಿಶ್ ಕಾರ್ಯ ಆರಂಭವಾಗಿದೆ. ಈ ಬೆಳವಣಿಗೆಯು ಸಿನಿ ಪ್ರಿಯರಿಗೆ ತೀವ್ರ ನಿರಾಸೆ ಮೂಡಿಸಿದೆ.
ವಿವಾದಕ್ಕೆ ಕಾರಣವೇನು?
ಊರ್ವಶಿ ಚಿತ್ರಮಂದಿರವು ಕಳೆದ ಎಂಟು ವರ್ಷಗಳಿಂದ ಲೀಸ್ (ಗುತ್ತಿಗೆ) ವಿವಾದದಲ್ಲಿ ಸಿಲುಕಿತ್ತು. ಬಸಟ್ಟಿ ಶೆಟ್ಟಿ ಎಂಬ ಭೂಮಾಲೀಕರಿಂದ ಗುತ್ತಿಗೆಗೆ ಪಡೆಯಲಾಗಿದ್ದ ಈ ಜಾಗದ ಗುತ್ತಿಗೆ ಅವಧಿಯು 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ಈ ಸಂಬಂಧ ಕಾನೂನು ಹೋರಾಟ ನಡೆಯುತ್ತಿದ್ದು, 3 ವರ್ಷಗಳ ಕಾಲ ಗುತ್ತಿಗೆ ಮುಂದುವರಿದಿದೆ ಎಂಬ ಚರ್ಚೆಗಳೂ ಕೇಳಿಬಂದಿದ್ದವು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಭೂಮಾಲೀಕರಿಗೆ ಜಾಗವನ್ನು ವಾಪಸ್ ನೀಡುವಂತೆ ಆದೇಶ ಹೊರಡಿಸಿತ್ತು.
ಈ ಆದೇಶದ ಬೆನ್ನಲ್ಲೇ ಪೊಲೀಸರು ಲ್ಯಾಂಡ್ ಲಾರ್ಡ್ ಜೊತೆ ಮಾತುಕತೆ ನಡೆಸಿ, ಇದೀಗ ಊರ್ವಶಿ ಥಿಯೇಟರ್‌ನ ಭವಿಷ್ಯಕ್ಕೆ ಅಂತ್ಯ ಹಾಡಿದ್ದಾರೆ. ಒಂದು ವೇಳೆ ಈ ಚಿತ್ರಮಂದಿರ ನೆಲಸಮ ಆಗದಿದ್ದರೆ, ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದವು. ಆದರೆ ಆ ಸಿನಿಮಾ ಬಿಡುಗಡೆಗೂ ಮುನ್ನವೇ ಈ ಸ್ಟಾರ್‌ಗಳ ಲಕ್ಕಿ ಥಿಯೇಟರ್ ಮಣ್ಣುಪಾಲಾಗುತ್ತಿದೆ.
ಊರ್ವಶಿಯ ಐತಿಹಾಸಿಕ ಹೆಜ್ಜೆಗುರುತುಗಳು
1970ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಅಮೃತಹಸ್ತದಿಂದ ಉದ್ಘಾಟನೆಗೊಂಡ ಊರ್ವಶಿ ಚಿತ್ರಮಂದಿರವು, ಐದು ಭಾಷೆಗಳ ಬರೋಬ್ಬರಿ 5,000ಕ್ಕೂ ಹೆಚ್ಚು ಸಿನಿಮಾಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ‘AK47’ ಸಿನಿಮಾ ಇಲ್ಲಿ 100 ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಸುಮಾರು 1,100 ಸೀಟುಗಳ ಸಾಮರ್ಥ್ಯ ಹೊಂದಿದ್ದ ಈ ಐಕಾನಿಕ್ ಥಿಯೇಟರ್, ಭಾರತದಲ್ಲಿ ಕೇವಲ ಎರಡು ಚಿತ್ರಮಂದಿರಗಳಲ್ಲಿರುವಂತಹ ಅತ್ಯಾಧುನಿಕ ಹಾಗೂ ವಿಶೇಷ ಸೌಂಡ್ ಟೆಕ್ನಾಲಜಿಯನ್ನು (Sound Technology) ಹೊಂದಿದ್ದ ಹೆಗ್ಗಳಿಕೆಗೆ ಪಾತ್ರವಾಗಿತ್ತು.