S Shorts

35 ಸಾವಿರ ರೂ. ಕೇಳಿದ ಅಭ್ಯರ್ಥಿಗೆ ಬರೋಬ್ಬರಿ 50 ಸಾವಿರ ವೇತನ ನೀಡಿದ IIT ಸ್ಟಾರ್ಟ್ಅಪ್: ಕಾರಣ ಕೇಳಿ ನೆಟ್ಟಿಗರು ಫಿದಾ!

35 ಸಾವಿರ ರೂ. ಕೇಳಿದ ಅಭ್ಯರ್ಥಿಗೆ ಬರೋಬ್ಬರಿ 50 ಸಾವಿರ ವೇತನ ನೀಡಿದ IIT ಸ್ಟಾರ್ಟ್ಅಪ್: ಕಾರಣ ಕೇಳಿ ನೆಟ್ಟಿಗರು ಫಿದಾ!
Author: Sagaradventure
Posted By: Sagaradventure
Updated: May 23, 2026 | 1:00 PM

ಕಾರ್ಪೊರೇಟ್ ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಪನಿಗಳು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವಾಗ ವೇತನವನ್ನು (Salary) ಆದಷ್ಟು ಕಡಿತಗೊಳಿಸಲು ಅಥವಾ ಚೌಕಾಸಿ ಮಾಡಲು ಯೋಚಿಸುತ್ತವೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಲ್ಲೊಂದು ಸ್ಟಾರ್ಟ್ಅಪ್ (Startup) ಕಂಪನಿಯು ಅಭ್ಯರ್ಥಿ ತಾನು ಕೇಳಿದ್ದಕ್ಕಿಂತ ಭಾರಿ ಮೊತ್ತದ ಹೆಚ್ಚಿನ ವೇತನವನ್ನು ನೀಡುವ ಮೂಲಕ ಇಂಟರ್ನೆಟ್ ಲೋಕದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಐಐಟಿ (IIT) ಪದವೀಧರರು ಹುಟ್ಟುಹಾಕಿರುವ ಈ ಸ್ಟಾರ್ಟ್ಅಪ್‌ನ ಫೌಂಡರ್‌ಗಳು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟ “IIT Ke 4 Launde” ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಭ್ಯರ್ಥಿಗೆ ಹೆಚ್ಚಿನ ವೇತನ ನೀಡಿದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ವೇತನ ಕೇಳಿದ್ದೆಷ್ಟು? ಕೊಟ್ಟಿದ್ದೆಷ್ಟು? 

ಹೊಸ ಇಂಜಿನಿಯರ್ ಒಬ್ಬರನ್ನು ನೇಮಿಸಿಕೊಳ್ಳುವಾಗ ನಡೆದ ಘಟನೆಯನ್ನು ಸಂಸ್ಥಾಪಕರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. “ಹಿಂದಿನ ಕಂಪನಿಯಲ್ಲಿ ತಿಂಗಳಿಗೆ 30,000 ರೂ. ವೇತನ ಪಡೆಯುತ್ತಿದ್ದ ಆ ಅಭ್ಯರ್ಥಿಯು, ನಮ್ಮ ಬಳಿ 35,000 ರೂ. ವೇತನ ಕೇಳಿದ್ದ. ಆದರೆ, ಆ ನಿರ್ದಿಷ್ಟ ಹುದ್ದೆಗೆ ನಮ್ಮ ಆಡಳಿತ ಮಂಡಳಿಯು ಈಗಾಗಲೇ 50,000 ರೂ. ಬಜೆಟ್ ಅನ್ನು ಅನುಮೋದಿಸಿತ್ತು. ಹೀಗಾಗಿ, ನಾವು ಆತನಿಗೆ 35 ಸಾವಿರದ ಬದಲು ತಿಂಗಳಿಗೆ 50,000 ರೂ. ವೇತನವನ್ನೇ ನೀಡಿ ಕೆಲಸಕ್ಕೆ ತೆಗೆದುಕೊಂಡೆವು” ಎಂದು ಹೇಳಿದ್ದಾರೆ.

ಕಾರಣ ಬಿಚ್ಚಿಟ್ಟ ಫೌಂಡರ್ಸ್ 

ಕೆಲಸಕ್ಕೆ ಸೇರಿದ ಕೆಲವೇ ದಿನಗಳ ಬಳಿಕ ಆ ಉದ್ಯೋಗಿ ಸಂಸ್ಥಾಪಕರ ಬಳಿ ಬಂದು, “ನಾನು ಕೇಳಿದ್ದಕ್ಕಿಂತ ಹೆಚ್ಚಿನ ವೇತನವನ್ನು ಏಕೇ ನೀಡಿದಿರಿ?” ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾನೆ.

ಇದಕ್ಕೆ ಉತ್ತರಿಸಿದ ಸಂಸ್ಥಾಪಕರು, “ನಾನು ಯಾಕೆ ಕೊಡಬಾರದು? ಆ ಹುದ್ದೆಯ ಕೆಲಸಕ್ಕೆ ತನ್ನದೇ ಆದ ಮೌಲ್ಯವಿದೆ ಮತ್ತು ಅದಕ್ಕಾಗಿ ಬಜೆಟ್ ಕೂಡ ಅನುಮೋದನೆಯಾಗಿದೆ. 30 ಅಥವಾ 35 ಸಾವಿರದ ಬಗ್ಗೆ ಯೋಚಿಸುವ ನಿನ್ನ ಆರ್ಥಿಕ ಸಮಸ್ಯೆಯನ್ನು ನಾನು ಬಗೆಹರಿಸಲು ಸಾಧ್ಯವಾದರೆ, ಆ ಕೆಲಸವನ್ನು ನಾನು ಖಂಡಿತ ಮಾಡಬೇಕು” ಎಂದು ವಿವರಿಸಿದ್ದಾರೆ.

ಉದ್ಯೋಗಿ ಉಳಿಸಿಕೊಳ್ಳುವ ತಂತ್ರ! 

ಈ ವೇಳೆ ವಿಡಿಯೋದಲ್ಲಿ ಮಾತನಾಡಿದ ಮತ್ತೊಬ್ಬ ಸಂಸ್ಥಾಪಕ, ಇದರ ಹಿಂದಿರುವ ಭವಿಷ್ಯದ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ. “ಜನರಿಗೆ ಈ ವಿಚಾರ ಬೇಗ ಅರ್ಥವಾಗುವುದಿಲ್ಲ. ಆ ಉದ್ಯೋಗಿ ಕಳೆದ ಮೂರು ವರ್ಷಗಳಿಂದ ನಮ್ಮೊಂದಿಗಿದ್ದಾನೆ. ಒಂದು ವೇಳೆ ಆತ ಮಧ್ಯದಲ್ಲೇ ಕೆಲಸ ಬಿಟ್ಟು ಹೋಗಿದ್ದರೆ, ಹೊಸಬರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಮತ್ತು ಅದಕ್ಕೆ ತಗುಲುವ ವೆಚ್ಚವು (Cost of rehiring) ನಮಗೆ ಬಹಳ ದುಬಾರಿಯಾಗುತ್ತಿತ್ತು. ಹೀಗಾಗಿ ಇದು ನಮ್ಮ ಕೆಲಸದ ಶೈಲಿಯಾಗಿದೆ. ನಾವು ಯಾವಾಗಲೂ ಕೇವಲ ಹಣ ಉಳಿಸುವುದಕ್ಕಿಂತ (Cost optimization) ಕೆಲಸದ ಗುಣಮಟ್ಟಕ್ಕೆ (Quality) ಹೆಚ್ಚಿನ ಆದ್ಯತೆ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಐಐಟಿ ಯುವಕರ ಈ ವಿನೂತನ ಕಾರ್ಪೊರೇಟ್ ನೀತಿಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.