ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯಲ್ಲಿ ‘ಐಎನ್‌ಎಸ್ ಮಾಲ್ವಾಣ್’ ಏರ್ ಮಾರ್ಷಲ್ ಎ.ಪಿ.ಸಿಂಗ್‌ರಿಂದ ಲೋಕಾರ್ಪಣೆಗೊಂಡಿದ್ದು, ಇಂದಿನಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡುವ ಮೂಲಕ ಕರಾವಳಿ ತೀರದ ಹಾಗೂ ರಾಷ್ಟ್ರದ ಕಡಲ ಭದ್ರತೆ ಮತ್ತಷ್ಟು ಅಭೇದ್ಯಗೊಂಡಿದೆ. ಶತ್ರುಗಳ ಜಲಾಂತರ್ಗಾಮಿಗಳನ್ನು ಸದ್ದಿಲ್ಲದೆ ಬೇಟೆಯಾಡುವ ವಿಶಿಷ್ಟ ಸಾಮರ್ಥ್ಯ ಹೊಂದಿರುವ ಇದು, ‘ಮಾಹೆ ಕ್ಲಾಸ್’ ಸರಣಿಯ ಎರಡನೇ ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆಯಾಗಿದೆ (ASW-SWC).
ಸ್ವದೇಶಿ ತಂತ್ರಜ್ಞಾನ ಹಾಗೂ ಸಾಮರ್ಥ್ಯ
‘ಆತ್ಮನಿರ್ಭರ ಭಾರತ’ ಅಭಿಯಾನದಡಿ ಕೊಚ್ಚಿ ಶಿಪ್‌ಯಾರ್ಡ್ ಲಿಮಿಟೆಡ್ ವಿನ್ಯಾಸಗೊಳಿಸಿರುವ ಈ ನೌಕೆಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಸ್ವದೇಶಿ ಬಿಡಿಭಾಗಗಳನ್ನು ಬಳಸಲಾಗಿದೆ. 78.8 ಮೀಟರ್ ಉದ್ದ ಮತ್ತು 1124 ಟನ್ ತೂಕವನ್ನು ಹೊಂದಿರುವ ಈ ನೌಕೆಯು ಮೂರು ಡೀಸೆಲ್ ಇಂಜಿನ್ ವಾಟರ್-ಜೆಟ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದೆ. ಆಳವಿಲ್ಲದ ಕಡಲ ತೀರಗಳಲ್ಲಿ ಶತ್ರುಗಳ ಚಲನವಲನಗಳನ್ನು ಪತ್ತೆಹಚ್ಚಲು ಅತ್ಯಂತ ಉಪಯುಕ್ತವಾಗಿರುವ ಇದು, ಸಮುದ್ರದಲ್ಲಿ 25 ನಾಟಿಕಲ್‌ಗೂ ಅಧಿಕ ವೇಗದಲ್ಲಿ ಅತಿ ಚುರುಕಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ವ್ಯವಸ್ಥೆ
ಈ ಯುದ್ಧನೌಕೆಯು ಅತ್ಯಾಧುನಿಕ ಯುದ್ಧ ಮತ್ತು ಕಣ್ಗಾವಲು ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಶತ್ರುಗಳಿಗೆ ಸಿಂಹಸ್ವಪ್ನವಾಗಲಿದೆ. ಇದರಲ್ಲಿ 30 ಎಂಎಂ ನೇವಲ್ ಸಪೋರ್ಟ್ ಗನ್, ಲಘು ತೂಕದ ಟಾರ್ಪಿಡೊ ಹಾಗೂ ಸ್ವದೇಶಿ ರಾಕೆಟ್ ಲಾಂಚರ್‌ಗಳನ್ನು ಅಳವಡಿಸಲಾಗಿದೆ. ಶತ್ರು ಜಲಾಂತರ್ಗಾಮಿಗಳ ಪತ್ತೆಗಾಗಿ ‘ಅಭಯ್’ ಸೋನಾರ್ ಮತ್ತು ಕ್ಷಿಪಣಿಗಳಿಂದ ರಕ್ಷಣೆ ಪಡೆಯಲು ‘ಮಾರೀಚ್’ ಟಾರ್ಪಿಡೊ ಡಿಕಾಯ್ ಸಿಸ್ಟಮ್ ಅನ್ನು ಸೇರಿಸಲಾಗಿದೆ. ಅಲ್ಲದೆ, ಬಿಇಎಲ್ ಮತ್ತು ವೆಸಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಕಾಂಬ್ಯಾಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಹಾಗೂ ವರುಣ, ನಯನ್ ಎಂಬ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್‌ಗಳನ್ನು ಅಳವಡಿಸಿ ನೌಕೆಯ ಘಾತಕ ಶಕ್ತಿಯನ್ನು ಹೆಚ್ಚಿಸಲಾಗಿದೆ.
ಐತಿಹಾಸಿಕ ಹಿನ್ನೆಲೆ ಹಾಗೂ ಕಾರ್ಯತಂತ್ರ
ಮಹಾರಾಷ್ಟ್ರದ ‘ಮಾಲ್ವಾಣ್’ ಪ್ರದೇಶದ ಹೆಸರನ್ನು ಹೊಂದಿರುವ ಈ ನೌಕೆ, ಭಾರತದ ಸಮೃದ್ಧ ನೌಕಾ ಪರಂಪರೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಪ್ರತೀಕವಾಗಿದೆ. ನೌಕೆಯ ಲಾಂಛನದಲ್ಲಿ ಶಿವಾಜಿ ಮಹಾರಾಜರ ಪರಾಕ್ರಮದ ಸಂಕೇತವಾದ ‘ಬಾಗ್ ನಖ’ (ಹುಲಿ ಉಗುರು) ಚಿತ್ರವಿದ್ದು, ಸಂಸ್ಕೃತದ “ನಿಶಬ್ದ ನಖಾ” (ಮೌನ ಉಗುರು) ಎಂಬುದು ಇದರ ಧ್ಯೇಯವಾಕ್ಯವಾಗಿದೆ. ಕಾರವಾರ ನೌಕಾನೆಲೆಗೆ ಐಎನ್‌ಎಸ್ ಮಾಲ್ವಾಣ್ ಸೇರ್ಪಡೆಯಾಗಿರುವುದು ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದಂತಹ ರಾಷ್ಟ್ರಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಲು ರಕ್ಷಣಾ ಪಡೆಗಳಿಗೆ ಮಹತ್ವದ ಅಸ್ತ್ರವಾಗಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
