ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಇತ್ತೀಚೆಗೆ ಪತ್ತೆಯಾಗಿದ್ದ ಅರೆಬೆಂದ ಮಹಿಳೆಯ ಶವದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಈ ಘೋರ ಹತ್ಯೆಯ ಹಿಂದೆ ಸಾಲದ ಹಣದ ವ್ಯವಹಾರವಿರುವುದು ತನಿಖೆಯಲ್ಲಿ ಬಯಲಾಗಿದ್ದು, ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ದುರ್ದೈವಿ. ಪರಿಚಯಸ್ಥನಾಗಿದ್ದ ಆರೋಪಿ ಆನಂದ್‌ಗೆ ಶಿಕ್ಷಕಿ ಜ್ಯೋತಿ ಅವರು ಬರೋಬ್ಬರಿ 14 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು ಎನ್ನಲಾಗಿದೆ.
ಕೊಲೆಗೆ ಕಾರಣವೇನು? ತಾನು ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಜ್ಯೋತಿ ಅವರು ಆನಂದ್ ಮೇಲೆ ಒತ್ತಡ ಹೇರುತ್ತಿದ್ದರು. ಪದೇ ಪದೇ ಹಣ ಕೇಳುತ್ತಿದ್ದರಿಂದ ಆಕ್ರೋಶಗೊಂಡ ಆರೋಪಿಯು, ಹಣ ನೀಡುವ ಬದಲು ಶಿಕ್ಷಕಿಯನ್ನೇ ಮುಗಿಸಲು ಸಂಚು ರೂಪಿಸಿದ್ದಾನೆ. ಅದರಂತೆ ಜ್ಯೋತಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಬಳಿಕ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿದ್ದಾನೆ.
ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾದಾಗ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ತೀವ್ರ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊಬೈಲ್ ಕರೆಗಳು ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಕಳದಳಕ್ಕೆ ತಳ್ಳಿದ್ದಾರೆ.
