S Shorts

ಖಾಸಗಿ ಬಸ್‌ಗಳ ಟಿಕೆಟ್ ದರ ಸುಲಿಗೆಗೆ RTO ಬಿಸಿ: 3,756 ಕೇಸ್ ದಾಖಲು, 33 ಬಸ್‌ಗಳು ಜಪ್ತಿ, 73.6 ಲಕ್ಷ ರೂ. ವಸೂಲಿ!

ಖಾಸಗಿ ಬಸ್‌ಗಳ ಟಿಕೆಟ್ ದರ ಸುಲಿಗೆಗೆ RTO ಬಿಸಿ: 3,756 ಕೇಸ್ ದಾಖಲು, 33 ಬಸ್‌ಗಳು ಜಪ್ತಿ, 73.6 ಲಕ್ಷ ರೂ. ವಸೂಲಿ!
Author: Sagaradventure
Posted By: Sagaradventure
Updated: Sep 18, 2026 | 10:53 AM

ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ರಾಜ್ಯ ಸಾರಿಗೆ ಇಲಾಖೆಯು ಸಮರ ಸಾರಿದೆ. ನಿಯಮ ಉಲ್ಲಂಘನೆ ಹಾಗೂ ಹೆಚ್ಚುವರಿ ದರ ಸುಲಿಗೆಯ ವಿರುದ್ಧ ಕಳೆದ 5 ದಿನಗಳಲ್ಲಿ ಕರ್ನಾಟಕದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿರುವ ಆರ್‌ಟಿಒ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ ಖಾಸಗಿ ಬಸ್‌ಗಳ ವಿರುದ್ಧ ಬರೋಬ್ಬರಿ 3,756 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜೊತೆಗೆ ಗಂಭೀರ ಲೋಪಗಳು ಕಂಡುಬಂದ 33 ಖಾಸಗಿ ಬಸ್‌ಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ. ಹಬ್ಬದ ನೆಪದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಕೆಲ ಖಾಸಗಿ ಬಸ್‌ಗಳು ಬರೋಬ್ಬರಿ 7,000 ರೂಪಾಯಿವರೆಗೆ ಟಿಕೆಟ್ ದರ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಸಾರಿಗೆ ಇಲಾಖೆಗೆ ವ್ಯಾಪಕ ದೂರುಗಳು ಬಂದಿದ್ದವು.

ಸೆಪ್ಟೆಂಬರ್ 11 ರಿಂದ 15 ರವರೆಗೆ ರಾಜ್ಯಾದ್ಯಂತ ನಡೆದ ಈ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ ಅಂತಾರಾಜ್ಯ ಸೇವೆಗಳು ಸೇರಿದಂತೆ ಒಟ್ಟು 14,987 ಖಾಸಗಿ ಬಸ್‌ಗಳನ್ನು ಆರ್‌ಟಿಒ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಪರವಾನಗಿ ನಿಯಮಗಳ ಉಲ್ಲಂಘನೆ, ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ, ತೆರಿಗೆ ವಂಚನೆ ಹಾಗೂ ಮಿತಿಮೀರಿ ಲಗೇಜ್ ಸಾಗಾಟ ಸೇರಿದಂತೆ ವಿವಿಧ ಲೋಪಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ 5 ದಿನಗಳ ತಪಾಸಣೆ ವೇಳೆ ಅಧಿಕಾರಿಗಳು ಒಟ್ಟು 73.6 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದು, ಇದರಲ್ಲಿ 40.3 ಲಕ್ಷ ರೂಪಾಯಿ ದಂಡದ ಮೊತ್ತವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬಂದ ದೂರುಗಳ ಆಧಾರದ ಮೇಲೆ ಈ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾದ ಉಲ್ಲಂಘನೆಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ದೂರುಗಳನ್ನು ಹೆಚ್ಚಿನ ವಿಚಾರಣೆ ಮತ್ತು ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಗಳಿಗೆ ರವಾನಿಸಲಾಗಿದೆ. 

ಪ್ರತಿ ಹಬ್ಬ-ಹರಿದಿನ, ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಖಾಸಗಿ ಬಸ್ ಮಾಲೀಕರು ಸಿಕ್ಕಾಪಟ್ಟೆ ದರ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ನಿರಂತರ ಸಮಸ್ಯೆಯಾಗಿದ್ದು, ಇಂತಹ ಸುಲಿಗೆಗೆ ಶಾಶ್ವತ ಕಡಿವಾಣ ಹಾಕಲು ಸಾರಿಗೆ ಸಚಿವರು ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.