S Shorts

1.11 ಲಕ್ಷ ರೂ. ದಂಡ ಕಟ್ಟಿದರೂ ‘ಸೈಲೆಂಟ್‌’ ಆಗದ ಸೈಲೆನ್ಸರ್: ಮತ್ತೆ ರಸ್ತೆಗಿಳಿದು ಉದ್ಧಟತನ ಮೆರೆದ ಕೇರಳ ವಿದ್ಯಾರ್ಥಿ! 

1.11 ಲಕ್ಷ ರೂ. ದಂಡ ಕಟ್ಟಿದರೂ ‘ಸೈಲೆಂಟ್‌’ ಆಗದ ಸೈಲೆನ್ಸರ್: ಮತ್ತೆ ರಸ್ತೆಗಿಳಿದು ಉದ್ಧಟತನ ಮೆರೆದ ಕೇರಳ ವಿದ್ಯಾರ್ಥಿ! 
Author: Rashmi Yadav
Posted By: Rashmi Yadav
Updated: Jan 17, 2026 | 7:08 AM

ಬೆಂಗಳೂರು: ಕಾರಿನ ಮೌಲ್ಯಕ್ಕಿಂತ ಹೆಚ್ಚು ದಂಡ ಕಟ್ಟಿ ಪಾಠ ಕಲಿಯಬೇಕಿದ್ದ ವಿದ್ಯಾರ್ಥಿಯೊಬ್ಬ, ದಂಡ ಪಾವತಿಸಿದ ಬೆನ್ನಲ್ಲೇ ಮತ್ತೆ ಅದೇ ಉದ್ಧಟತನವನ್ನು ಪ್ರದರ್ಶಿಸಿದ ಘಟನೆ ನಡೆದಿದೆ. ಅಕ್ರಮವಾಗಿ ಕಾರು ಮಾಡಿಫೈ (Modify) ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ ಯಲಹಂಕ ಸಂಚಾರಿ ಪೊಲೀಸರು ಬರೋಬ್ಬರಿ 1,11,500 ರೂ. ದಂಡ ವಿಧಿಸಿದ್ದರು. ಆದರೆ, ಈ ದಂಡ ಪಾವತಿಸಿದ ನಂತರವೂ ವಿದ್ಯಾರ್ಥಿ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾನೆ.

ಕಾರಿನ ಮೌಲ್ಯಕ್ಕಿಂತ ದಂಡವೇ ಹೆಚ್ಚು!

ಕೇರಳದ ಎರ್ನಾಕುಲಂ ನೋಂದಣಿ ಸಂಖ್ಯೆ (KL 7 AB 8764) ಹೊಂದಿರುವ ಈ ಕಾರು ಸುಮಾರು 17 ವರ್ಷ ಹಳೆಯದು (2007-08 ಮಾಡೆಲ್). ಇದರ ಸದ್ಯದ ಮಾರುಕಟ್ಟೆ ಮೌಲ್ಯ ಅಂದಾಜು 70 ಸಾವಿರ ರೂಪಾಯಿಗಳು. ಆದರೆ, ಮೋಟಾರು ವಾಹನ ಕಾಯ್ದೆಯ ವಿವಿಧ ಉಲ್ಲಂಘನೆಗಳಿಗಾಗಿ ಆರ್‌ಟಿಒ (RTO) ಅಧಿಕಾರಿಗಳು ಕಾರಿನ ಮೌಲ್ಯಕ್ಕಿಂತಲೂ ಅಧಿಕ, ಅಂದರೆ 1,11,500 ರೂ. ದಂಡ ವಿಧಿಸಿದ್ದು ಭಾರೀ ಸುದ್ದಿಯಾಗಿತ್ತು.

ನಿಯಮಗಳ ಸರಣಿ ಉಲ್ಲಂಘನೆ

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ಮಹಮ್ಮದ್‌ ಸೈಫನ್‌ ಎಂಬ ವಿದ್ಯಾರ್ಥಿ ಈ ಕಾರನ್ನು ಚಲಾಯಿಸುತ್ತಿದ್ದನು. ಯಲಹಂಕ ಮತ್ತು ಹೆಣ್ಣೂರು ಭಾಗದಲ್ಲಿ ಸಂಚರಿಸುತ್ತಿದ್ದ ಈ ಕಾರಿನಲ್ಲಿ ಕಂಡುಬಂದ ಕಿವಿಗಡಚಿಕ್ಕುವ ಶಬ್ದದೊಂದಿಗೆ ಬೆಂಕಿ ಉಗುಳುವ ಸೈಲೆನ್ಸರ್ ಅಳವಡಿಸಲಾಗಿದೆ. ಕಾರಿನೊಳಗೆ ಯಾರಿದ್ದಾರೆ ಎಂದು ಕಾಣದಂತೆ ಸಂಪೂರ್ಣ ಕಪ್ಪು ಗಾಜಿನ (Tinted Glass) ಬಳಕೆ. ಅನುಮತಿ ಇಲ್ಲದೆ ಕಾರಿನ ಬಣ್ಣ ಬದಲಾವಣೆ ಮತ್ತು ಹೆಡ್‌ಲೈಟ್‌ ಅನ್ನು ಡಿಸ್ಕೊ ಲೈಟ್‌ನಂತೆ ಮಾರ್ಪಾಡು ಮಾಡಲಾಗಿದೆ. 

ಪೊಲೀಸರ ದಿಟ್ಟ ಕ್ರಮ ಮತ್ತು ರಾಜಕೀಯ ಒತ್ತಡ

ಭಾರತಿ ನಗರ–ಹೆಣ್ಣೂರು ರಸ್ತೆಯಲ್ಲಿ ಈ ಕಾರು ಕರ್ಕಶ ಶಬ್ದ ಮಾಡುತ್ತಾ ಸಂಚರಿಸುವುದನ್ನು ಕಂಡ ಸಾರ್ವಜನಿಕರು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಯಲಹಂಕ ಸಂಚಾರಿ ಪೊಲೀಸರು ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. 

ಈ ಹಂತದಲ್ಲಿ, ವಿದ್ಯಾರ್ಥಿಯ ಪರವಾಗಿ ಕೆಲವು ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರಿ, ಕಡಿಮೆ ದಂಡ ವಿಧಿಸಿ ವಾಹನ ಬಿಡುವಂತೆ ಕೋರಿದ್ದರು. ಆದರೆ, ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಇನ್‌ಸ್ಪೆಕ್ಟರ್‌ ನಾಗರತ್ನ ಮತ್ತು ತಂಡ) ಹಾಗೂ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 182 (1)ಎ ಅನ್ವಯ ಗರಿಷ್ಠ ದಂಡ ವಿಧಿಸಿದರು.

ದಂಡದ ಬಳಿಕವೂ ‘ಹೀರೋಯಿಸಂ’

ಬುಧವಾರದಂದು ವಿದ್ಯಾರ್ಥಿ 1.11 ಲಕ್ಷ ರೂ. ದಂಡವನ್ನು ಪಾವತಿಸಿ ಕಾರನ್ನು ಬಿಡಿಸಿಕೊಂಡಿದ್ದಾನೆ. ಆದರೆ, ತಪ್ಪಿನ ಅರಿವಾಗುವ ಬದಲು, ಕಾರು ಬಿಡಿಸಿಕೊಂಡ ತಕ್ಷಣವೇ ಮತ್ತೆ ವಿಡಿಯೋ ಮಾಡಿ ‘Sinaaney’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ʻMoney mattersʼ ಎಂದು caption ಕೊಟ್ಟಿದ್ದಾನೆ. ಕಾನೂನಿಗೆ ಬೆಲೆ ನೀಡದ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದರೆ, ಇನ್ನೂ ಕೆಲವರು ನಿಯಮ ಉಲ್ಲಂಘಿಸಿದವನ ಪರವಾಗಿ ಕಮೆಂಟ್‌ ಮಾಡಿದ್ದಾರೆ. ಪೊಲೀಸರು ಇನ್ನು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಕೆಟ್ಟ ಮೇಲೂ ಬುದ್ಧಿ ಬರಲಿಲ್ಲಾ ಅನ್ನೋದು ಇದಕ್ಕೇ ಅಲ್ವಾ?

https://www.instagram.com/reel/DTktaPmkUmO/