S Shorts

KRIDL ಬಹುಕೋಟಿ ವಂಚನೆ ಪ್ರಕರಣ; ಪ್ರಮುಖ ಕಿಂಗ್‌ಪಿನ್ ಝರಣಪ್ಪ ಚಿಂಚೋಳಿಕರ್ ಸೇರಿ ಈರ್ವರ ಬಂಧನ!

KRIDL ಬಹುಕೋಟಿ ವಂಚನೆ ಪ್ರಕರಣ; ಪ್ರಮುಖ ಕಿಂಗ್‌ಪಿನ್ ಝರಣಪ್ಪ ಚಿಂಚೋಳಿಕರ್ ಸೇರಿ ಈರ್ವರ ಬಂಧನ!
Author: Sagaradventure
Posted By: Sagaradventure
Updated: Jul 16, 2026 | 10:16 AM

ಕೊಪ್ಪಳದ ಕೆಆರ್‌ಐಡಿಎಲ್ (KRIDL) ವಿಭಾಗದಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕಿಂಗ್‌ಪಿನ್ ಝರಣಪ್ಪ ಚಿಂಚೋಳಿಕರ್ ಹಾಗೂ ಗುತ್ತಿಗೆದಾರ ದೇವರಾಜ ಅವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾಮಗಾರಿ ಮಾಡದೆ 72 ಕೋಟಿ ರೂ. ಬಿಲ್ ಎತ್ತುವಳಿ 

ಕೊಪ್ಪಳದ ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಅಭಿಯಂತರರಾಗಿ (Executive Engineer) ಸೇವೆ ಸಲ್ಲಿಸುತ್ತಿದ್ದ ಝರಣಪ್ಪ ಚಿಂಚೋಳಿಕರ್ (Z M Chincholikar), ಜಿಲ್ಲೆಯ ಹಲವೆಡೆ ಯಾವುದೇ ಕಾಮಗಾರಿ ನಡೆಸದೆ ಕೇವಲ ಕಾಗದದ ಮೇಲೆಯೇ ಕಾಮಗಾರಿ ತೋರಿಸಿ ಬರೋಬ್ಬರಿ 72 ಕೋಟಿ ರೂಪಾಯಿಗಳ ಬಿಲ್ ಎತ್ತುವಳಿ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಬೃಹತ್ ಹಗರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ (DySP) ಮಲ್ಲಿಕಾರ್ಜುನ ಚುಕ್ಕಿ ಅವರ ನೇತೃತ್ವದ ಅಧಿಕಾರಿಗಳ ತಂಡವು ಇದೀಗ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಾದ ಎಕ್ಸಿಕ್ಯೂಟಿವ್ ಇಂಜಿನಿಯರ್ ಝರಣಪ್ಪ ಚಿಂಚೋಳಿಕರ್ ಹಾಗೂ ಈ ಅಕ್ರಮದಲ್ಲಿ ಶಾಮೀಲಾಗಿದ್ದ ಗುತ್ತಿಗೆದಾರ ದೇವರಾಜ ಅವರನ್ನು ಲೋಕಾಯುಕ್ತ ಪೊಲೀಸರು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.