S Shorts

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ 2026ರ ಮೊದಲ ಹಂತದ ಹುಲಿ ಗಣತಿ ಯಶಸ್ವಿ ಮುಕ್ತಾಯ; DNA, ಹೈಟೆಕ್ ಕ್ಯಾಮೆರಾ ಮ್ಯಾಚಿಂಗ್ ಸಿದ್ಧತೆ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ 2026ರ ಮೊದಲ ಹಂತದ ಹುಲಿ ಗಣತಿ ಯಶಸ್ವಿ ಮುಕ್ತಾಯ; DNA, ಹೈಟೆಕ್ ಕ್ಯಾಮೆರಾ ಮ್ಯಾಚಿಂಗ್ ಸಿದ್ಧತೆ
Author: Sagaradventure
Posted By: Sagaradventure
Updated: May 27, 2026 | 12:16 PM

ಕಾರ್ಕಳ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ (WII) ಮಾರ್ಗಸೂಚಿಯಂತೆ ದೇಶಾದ್ಯಂತ ಆರಂಭವಾಗಿದ್ದ 2026ನೇ ಸಾಲಿನ ಮೊದಲ ಹಂತದ ಹುಲಿ ಗಣತಿ ಕಾರ್ಯವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಲಯದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಜನವರಿಯಲ್ಲಿ ಆರಂಭವಾಗಿದ್ದ ಈ ಸುದೀರ್ಘ ಪ್ರಕ್ರಿಯೆಯು ಮೇ 26ರಂದು ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೀಗ ಮುಂದಿನ ವೈಜ್ಞಾನಿಕ ಹಾಗೂ ವಿಶ್ಲೇಷಣಾತ್ಮಕ ಹಂತಕ್ಕೆ ಸಜ್ಜಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 600.57 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಕೊಡಚಾದ್ರಿ, ಆಗುಂಬೆ, ಸೋಮೇಶ್ವರ, ಮೂಕಾಂಬಿಕಾ ವನ್ಯಜೀವಿ ವಲಯ, ಕಾರ್ಕಳ, ಹೆಬ್ರಿ ಹಾಗೂ ಬೆಳ್ತಂಗಡಿಯವರೆಗೆ ವ್ಯಾಪಿಸಿದೆ. ಇದು ಹುಲಿ ಮತ್ತು ಚಿರತೆ ಸೇರಿದಂತೆ ನೂರಾರು ವನ್ಯಜೀವಿಗಳ ಪ್ರಮುಖ ಆಶ್ರಯ ತಾಣವಾಗಿದ್ದು, 2022ರ ಗಣತಿ ವರದಿಯಲ್ಲಿ ಇಲ್ಲಿ ಎರಡು ಹುಲಿಗಳ ಇರುವಿಕೆ ಪತ್ತೆಯಾಗಿತ್ತು.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ 400ಕ್ಕೂ ಹೆಚ್ಚು ಹೈಟೆಕ್ ಕ್ಯಾಮೆರಾಗಳು

ಈ ಬಾರಿಯ ಗಣತಿಯಲ್ಲಿ ಸಾಂಪ್ರದಾಯಿಕ ಪದ್ಧತಿಗಳಿಗಿಂತ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು.

ಕ್ಯಾಮೆರಾ ಟ್ರ್ಯಾಪ್ಸ್: ಅರಣ್ಯದ ಆಯಕಟ್ಟಿನ ಜಾಗಗಳಲ್ಲಿ 400ಕ್ಕೂ ಹೆಚ್ಚು ಅತ್ಯಾಧುನಿಕ ‘ಕ್ಯಾಮೆರಾ ಟ್ರ್ಯಾಪ್‌’ಗಳನ್ನು (Camera Traps) ಅಳವಡಿಸಲಾಗಿತ್ತು. ಇವು ಪ್ರಾಣಿಗಳ ಸಣ್ಣ ಚಲನವಲನಕ್ಕೂ ತಕ್ಷಣವೇ ಸಕ್ರಿಯಗೊಂಡು ಚಿತ್ರ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತವೆ. ದಟ್ಟ ಮಂಜು ಅಥವಾ ಕಗ್ಗತ್ತಲಲ್ಲೂ ಪ್ರಾಣಿಗಳಿಗೆ ತೊಂದರೆಯಾಗದಂತೆ ‘ಇನ್‌ಫ್ರಾರೆಡ್’ (Infrared) ಕಿರಣಗಳ ಮೂಲಕ ಸ್ಪಷ್ಟವಾದ ಬ್ಲ್ಯಾಕ್ ಅಂಡ್ ವೈಟ್ ಚಿತ್ರಗಳನ್ನು ಇವು ದಾಖಲಿಸುತ್ತವೆ.

ಜಿಪಿಎಸ್ ಆ್ಯಪ್ ಬಳಿಕ: ಪಾರದರ್ಶಕತೆ ಕಾಯ್ದುಕೊಳ್ಳಲು ಸಮೀಕ್ಷೆಯ ಎಲ್ಲಾ ದತ್ತಾಂಶಗಳನ್ನು ಜಿಪಿಎಸ್ (GPS) ಆಧಾರಿತ ಮೊಬೈಲ್ ಆ್ಯಪ್ ಮೂಲಕವೇ ನೇರವಾಗಿ ಅಪ್‌ಲೋಡ್ ಮಾಡಲಾಗಿದೆ.

200 ಸಿಬ್ಬಂದಿ, ಎರಡು ಹಂತಗಳ ಕಾರ್ಯಾಚರಣೆ

ಕುದುರೆಮುಖ ವನ್ಯಜೀವಿ ವಿಭಾಗದ 200ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಈ ಬೃಹತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಾಂಸಾಹಾರಿ ಪ್ರಾಣಿಗಳ ಹೆಜ್ಜೆಗುರುತು, ಮರಗಳ ಮೇಲಿನ ಉಗುರಿನ ಗೀರುಗಳು ಹಾಗೂ ವನ್ಯಜೀವಿಗಳ ಮಲದ ಮಾದರಿಗಳನ್ನು ಸಂಗ್ರಹಿಸಲಾಯಿತು. ಪ್ರತಿ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗಿ ಕಾಡುಕೋಣ, ಕಡವೆ, ಜಿಂಕೆ, ಕಾಡುನಾಯಿ ಮುಂತಾದ ಸಸ್ಯಾಹಾರಿ ಪ್ರಾಣಿಗಳ ಇರುವಿಕೆಯ ಕುರುಹುಗಳನ್ನು ದಾಖಲಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ಇನ್ನು ನಿಖರ ಸಂಖ್ಯೆ ಫಿಲ್ಟರಿಂಗ್ ಹಾಗೂ ಡಿಎನ್‌ಎ ಟೆಸ್ಟ್

ಕ್ಷೇತ್ರಮಟ್ಟದ ಗಣತಿ ಮುಕ್ತಾಯಗೊಂಡಿದ್ದರೂ ಅಂತಿಮ ನಿಖರ ವರದಿಗಾಗಿ ಸುದೀರ್ಘ ವೈಜ್ಞಾನಿಕ ವಿಶ್ಲೇಷಣೆ ನಡೆಯಬೇಕಿದೆ. ಆ್ಯಪ್‌ನಲ್ಲಿ ದಾಖಲಿಸಿರುವ ಮಾಹಿತಿ ಮತ್ತು ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಲಕ್ಷಾಂತರ ಚಿತ್ರಗಳನ್ನು ಕ್ರೋಡೀಕರಿಸಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ (WII) ಕಳುಹಿಸಲಾಗುತ್ತದೆ. ಅಲ್ಲಿನ ಸುಧಾರಿತ ಸಾಫ್ಟ್‌ವೇರ್ ಮೂಲಕ ಹುಲಿಗಳ ವಿಶಿಷ್ಟ ಪಟ್ಟೆಗಳನ್ನು (Stripes) ಮ್ಯಾಚ್ ಮಾಡಲಾಗುತ್ತದೆ. ಇದರಿಂದ ಒಂದೇ ಹುಲಿ ಬೇರೆ ಬೇರೆ ಕ್ಯಾಮೆರಾಗಳಲ್ಲಿ ಸಿಲುಕಿದ್ದರೆ ಅದನ್ನು ಫಿಲ್ಟರ್ ಮಾಡಿ ನಿಖರ ಸಂಖ್ಯೆಯನ್ನು ಗುರುತಿಸಲಾಗುತ್ತದೆ. ಜತೆಗೆ ಸಂಗ್ರಹಿಸಲಾದ ಮಲದ ಮಾದರಿಗಳ ಡಿಎನ್‌ಎ (DNA) ಪರೀಕ್ಷೆಯ ಮೂಲಕ ಹುಲಿಗಳ ಲಿಂಗ ಮತ್ತು ತಳಿ ವೈವಿಧ್ಯವನ್ನು ವೈಜ್ಞಾನಿಕವಾಗಿ ದೃಢೀಕರಿಸಲಾಗುತ್ತದೆ.

“ಎರಡು ಹಂತಗಳಲ್ಲಿ ಹುಲಿ ಗಣತಿ ಕಾರ್ಯ ನಡೆದಿದ್ದು, ಮೇ 26ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 200ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ ಮೂಲಕ ಗಣತಿ ನಡೆಸಲಾಗಿದೆ. ಗಣತಿ ಕಾರ್ಯ ಸುಗಮವಾಗಿ ನಡೆಯಲು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕುದುರೆಮುಖ ಪೀಕ್, ನೇತ್ರಾವತಿ, ಬಂಡಾಜೆ ಜಲಪಾತ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಚಾರಣವನ್ನು (Trekking) ನಿಷೇಧಿಸಲಾಗಿತ್ತು. ಶೀಘ್ರದಲ್ಲೇ ಸಾರ್ವಜನಿಕ ಚಾರಣಕ್ಕೆ ಮತ್ತೆ ಅವಕಾಶ ಮಾಡಿಕೊಡಲಾಗುವುದು.”ಸಿವರಾಮ್ ಬಾಬು, ಡಿಎಫ್‌ಒ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ