S Shorts

Chikmagalur | 10 ಲಕ್ಷಕ್ಕೆ ಬೇಡಿಕೆ, 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್‌ಗಳು!

Chikmagalur | 10 ಲಕ್ಷಕ್ಕೆ ಬೇಡಿಕೆ, 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್‌ಗಳು!
Author: Sagaradventure
Posted By: Sagaradventure
Updated: Aug 22, 2026 | 10:16 AM

ಚಿಕ್ಕಮಗಳೂರಿನಲ್ಲಿ ಕೃಷಿ ಜಮೀನಿನ ಸರ್ವೆ ಮಾಡಿ ನಕ್ಷೆ (ಸ್ಕೆಚ್) ತಯಾರಿಸಿಕೊಡಲು ಬರೋಬ್ಬರಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ 2 ಲಕ್ಷ ರೂಪಾಯಿ ಪಡೆಯುತ್ತಿದ್ದ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಮತ್ತು ರಂಗನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಇಂದಾವರ ಗ್ರಾಮದ ನಿವಾಸಿ ಧರಣೇಶ್ ಎಂಬುವವರೇ ಇವರ ವಿರುದ್ಧ ದೂರು ನೀಡಿದ್ದವರು. ಧರಣೇಶ್ ಅವರು ತಮ್ಮ ಕೃಷಿ ಜಮೀನಿನ ಅಧಿಕೃತ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ, ಅದಕ್ಕೆ ಸಂಬಂಧಿಸಿದ ಸ್ಕೆಚ್ ತಯಾರಿಸಿಕೊಡುವಂತೆ ಈ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಈ ಕೆಲಸವನ್ನು ಮಾಡಿಕೊಡಲು ಅಧಿಕಾರಿಗಳು ಬರೋಬ್ಬರಿ 10 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಭ್ರಷ್ಟ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಧರಣೇಶ್, ನೇರವಾಗಿ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ರೂಪಿಸಿದ ಅಧಿಕಾರಿಗಳು, ಧರಣೇಶ್ ಅವರಿಂದ ತಮ್ಮ ಖಾಸಗಿ ಕಚೇರಿಯಲ್ಲಿ 2 ಲಕ್ಷ ರೂ. ಮುಂಗಡ ಹಣವನ್ನು ಪಡೆಯುತ್ತಿದ್ದಾಗಲೇ ದಾಳಿ ನಡೆಸಿ ಇಬ್ಬರೂ ಸರ್ವೇಯರ್‌ಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ (DySP) ತಿರುಮಲೇಶ್ ಅವರ ನೇತೃತ್ವದ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದೆ.