S Shorts

ಕರಾವಳಿಗರ ಬಹುದಿನಗಳ ಕನಸು ನನಸು: ನೈರುತ್ಯ ರೈಲ್ವೆಗೆ ಅಧಿಕೃತವಾಗಿ ಸೇರ್ಪಡೆಯಾದ Mangaluru ರೈಲ್ವೆ ಜಾಲ

ಕರಾವಳಿಗರ ಬಹುದಿನಗಳ ಕನಸು ನನಸು: ನೈರುತ್ಯ ರೈಲ್ವೆಗೆ ಅಧಿಕೃತವಾಗಿ ಸೇರ್ಪಡೆಯಾದ Mangaluru ರೈಲ್ವೆ ಜಾಲ
Author: Sagaradventure
Posted By: Sagaradventure
Updated: Aug 22, 2026 | 12:38 PM

ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಾಗೂ ರೈಲು ಪ್ರಯಾಣಿಕರ ದಶಕಗಳ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಮಂಗಳೂರು ಪ್ರದೇಶದ ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆ ವಲಯದಿಂದ (ಪಾಲಕ್ಕಾಡ್ ವಿಭಾಗ) ನೈರುತ್ಯ ರೈಲ್ವೆ ವಲಯಕ್ಕೆ (ಮೈಸೂರು ವಿಭಾಗ) ವರ್ಗಾಯಿಸಲು ರೈಲ್ವೆ ಮಂಡಳಿ ಶುಕ್ರವಾರ ಅಧಿಕೃತ ಅನುಮೋದನೆ ನೀಡಿದೆ. 

ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ನಾಂದಿ ಹಾಡಲಿರುವ ಈ ಮಹತ್ವದ ಬದಲಾವಣೆಯು ಮುಂಬರುವ ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದೆ ಎಂದು ಮಂಡಳಿಯ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೊಸ ಆದೇಶದ ಅನ್ವಯ, ಉಳ್ಳಾಲದವರೆಗಿನ ಮಂಗಳೂರು ಪ್ರದೇಶವು ಇನ್ನು ಮುಂದೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡಲಿದೆ. ಈವರೆಗೆ ಪಡೀಲ್ ಅನ್ನು ಇಂಟರ್‌ಚೇಂಜ್ ಪಾಯಿಂಟ್ ಆಗಿ ಬಳಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಉಳ್ಳಾಲವು ನೈರುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ಅಧಿಕೃತ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. 

ಹಾಗೆಯೇ, ತೋಕೂರು ನಿಲ್ದಾಣವು ಹಿಂದಿನಂತೆಯೇ ಕೊಂಕಣ ರೈಲ್ವೆ ನಿಗಮದ ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದ್ದು, ಇದು ಕೊಂಕಣ ಮತ್ತು ನೈರುತ್ಯ ರೈಲ್ವೆ ನಡುವಿನ ಸಂಪರ್ಕ ಬಿಂದುವಾಗಲಿದೆ. ನೂತನ ವ್ಯವಸ್ಥೆಯಲ್ಲಿ ವಿಭಾಗೀಯ ಪ್ರಧಾನ ಕಚೇರಿಯು ಮೈಸೂರಿನಲ್ಲಿ ಹಾಗೂ ವಲಯ ಪ್ರಧಾನ ಕಚೇರಿಯು ಹುಬ್ಬಳ್ಳಿಯಲ್ಲಿ ಇರಲಿದೆ.

ಈ ಐತಿಹಾಸಿಕ ನಿರ್ಧಾರದ ಬಗ್ಗೆ ತೀವ್ರ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಮಂಗಳೂರು ಪ್ರದೇಶದ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸುವುದು ನನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿತ್ತು ಎಂದಿದ್ದಾರೆ. ಜುಲೈನಲ್ಲಿ ಮಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಫಲವಾಗಿ ಹಾಗೂ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ತ್ವರಿತ ಸ್ಪಂದನೆಯಿಂದ ಈ ಸಂಕೀರ್ಣ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. 

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ಈ ನಿರ್ಧಾರದಿಂದ ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲಿದ್ದ ಆಡಳಿತಾತ್ಮಕ ಗೊಂದಲಗಳು ಬಗೆಹರಿಯಲಿದ್ದು, ಇಲಾಖೆಗಳ ನಡುವಿನ ಸಮನ್ವಯ ಹೆಚ್ಚಲಿದೆ. ಜೊತೆಗೆ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕದ ವಿಸ್ತರಣೆಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.