ಬೆಂಗಳೂರು: ಆರ್‌ಎಸ್‌ಎಸ್‌ನಲ್ಲಿ ಮುಸ್ಲಿಂರನ್ನು ಸೇರಿಸಿಕೊಳ್ಳಲು ಅವಕಾಶ ಇದೆಯಾ? ಅಲ್ಪಸಂಖ್ಯಾತ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಗುತ್ತದೆಯಾ? ಎಂಬ ಪ್ರಶ್ನೆಗೆ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಸ್ಪಷ್ಟನೆ ನೀಡಿದ್ದಾರೆ.
“ಸಂಘದಲ್ಲಿ ಜಾತಿ, ಲಿಂಗ, ಧರ್ಮ ಎಂಬ ಬೇಧವಿಲ್ಲ. ಮುಸ್ಲಿಂ (Muslim), ಕ್ರೈಸ್ತ (Christians), ಬ್ರಾಹ್ಮಣ, ಶೈವ ಯಾರೇ ಆಗಲಿ ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವಾಗ ತಮ್ಮ ಧರ್ಮವನ್ನು ಬದಿಗಿಟ್ಟು ಭಾರತ ಮಾತೆಯ ಮಕ್ಕಳಾಗಿ, ಹಿಂದೂ ಸಮಾಜದ ಸದಸ್ಯರಾಗಿ ಬರಬೇಕು,” ಎಂದು ಭಾಗವತ್ ಹೇಳಿದರು.
ಅವರು ಮುಂದುವರಿದು, “ಯಾವ ಧರ್ಮದವರಾದರೂ ಶಾಖೆಗೆ ಬರಬಹುದು, ಆದರೆ ಹಿಂದೂ ಸಮಾಜವನ್ನು ಒಪ್ಪಿಕೊಂಡು ಬರಬೇಕು. ನಾವು ಯಾರ ಧರ್ಮದವರು ಎಂದು ಕೇಳುವುದಿಲ್ಲ. ಎಲ್ಲರೂ ರಾಷ್ಟ್ರದ ಮಕ್ಕಳೇ,” ಎಂದು ಹೇಳಿದರು. ಹಾಗೇ ತೃತೀಯ ಲಿಂಗ (transgender)ದವರಿಗೆ ಸಂಘದಲ್ಲಿ ಅವಕಾಶ ಇದೆಯಾ ಎಂಬ ಪ್ರಶ್ನೆಗೆ, “ಸಂಘದಲ್ಲಿ ಎಲ್ಲರಿಗೂ ಅವಕಾಶ ಇದೆ, ಆದರೆ ಸಂಘದ ನಿಯಮ ಮತ್ತು ಶಿಸ್ತು ಪಾಲಿಸಬೇಕು,” ಎಂದು ಸ್ಪಷ್ಟನೆ ನೀಡಿದರು.
