S Shorts

Bar ಎದುರು ನಿಲ್ಲಿಸಿದ್ದ ಕಾರು ನಿಗೂಢ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಸ್ಥಳೀಯರು!

Bar ಎದುರು ನಿಲ್ಲಿಸಿದ್ದ ಕಾರು ನಿಗೂಢ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಸ್ಥಳೀಯರು!
Author: Sagaradventure
Posted By: Sagaradventure
Updated: Jul 26, 2026 | 8:48 AM

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಬಾರ್‌ವೊಂದರ ಎದುರು ನಿಲ್ಲಿಸಿದ್ದ ಕಾರೊಂದು ನಿಗೂಢವಾಗಿ ಸ್ಫೋಟಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಎಂಬುವವರು ತಂದು ನಿಲ್ಲಿಸಿದ್ದ ಮಹಿಂದ್ರಾ XUV300 ಕಾರು ಭಾರಿ ಶಬ್ದದೊಂದಿಗೆ ಬ್ಲಾಸ್ಟ್ ಆಗಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಾರಿನ ಬಿಡಿಭಾಗಗಳು ನುಚ್ಚುನೂರಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಲ್ಲದೆ, ಪಕ್ಕದಲ್ಲಿದ್ದ ವೈನ್ ಶಾಪ್ ಗೋಡೆಯ ಸಿಮೆಂಟ್ ಉದುರಿದ್ದು, ಒಳಗಿದ್ದ ಬಿಯರ್ ಹಾಗೂ ಕೂಲ್ ಡ್ರಿಂಕ್ಸ್ ಬಾಟಲ್‌ಗಳು ಕೆಳಗೆ ಬಿದ್ದು ಒಡೆದುಹೋಗಿವೆ.

ಬಾಂಬ್ ಸ್ಫೋಟದ ಶಂಕೆ, ಓರ್ವನಿಗೆ ಗಾಯ

​ಸ್ಫೋಟಗೊಂಡಿರುವ ಈ ಕಾರು ಎಂ.ಜಿ. ತೋರಗಲ್ ಎಂಬುವರ ಹೆಸರಿನಲ್ಲಿದ್ದು, ಸ್ಫೋಟದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಘಟನೆ ನಡೆದಾಗ ಕಾರಿನಿಂದ ಸ್ವಲ್ಪ ದೂರದಲ್ಲಿದ್ದ ಪೂಜಾರಿ ಎಂಬ ಯುವಕನಿಗೆ ಗಾಯಗಳಾಗಿದ್ದು, ಆತನನ್ನು ಜಮಖಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. “ಜುಲೈ 25ರ ಸಂಜೆ 4.30ರ ಸುಮಾರಿಗೆ ಕಾರನ್ನು ಬಾರ್ ಬಳಿ ತಂದು ನಿಲ್ಲಿಸಲಾಗಿತ್ತು. ರಾತ್ರಿ ಮನೆಗೆ ಹೊರಡುವಾಗ ಏಕಾಏಕಿ ಸ್ಫೋಟದ ಶಬ್ದ ಕೇಳಿಸಿದೆ. ಇದೊಂದು ಬಾಂಬ್ ಸ್ಫೋಟವಾಗಿರಬಹುದು ಎಂಬ ಅನುಮಾನವಿದೆ” ಎಂದು ಮ್ಯಾನೇಜರ್ ಹನುಮಂತ ಆತಂಕ ವ್ಯಕ್ತಪಡಿಸಿದ್ದಾರೆ.

ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

​ಕಾರು ಸ್ಫೋಟದ ರಭಸಕ್ಕೆ ಸುತ್ತಮುತ್ತಲಿನ ಮನೆಗಳ ಮೇಲ್ಛಾವಣಿಯ ಶೀಟ್‌ಗಳು ಹಾರಿಹೋಗಿವೆ. ಘಟನಾ ಸ್ಥಳದಲ್ಲಿ ಕೆಲಕಾಲ ದಟ್ಟ ಧೂಳು ಆವರಿಸಿ ಜನರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಕಾರಿನೊಳಗೆ ಅಥವಾ ತೀರಾ ಸಮೀಪದಲ್ಲಿ ಯಾರೂ ಇರಲಿಲ್ಲವಾದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಹಾನಿ ತಪ್ಪಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.

ಸದ್ಯ ಜಮಖಂಡಿ ಗ್ರಾಮೀಣ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಇದೊಂದು ಕಿಡಿಗೇಡಿಗಳ ದುಷ್ಕೃತ್ಯವೇ ಅಥವಾ ತಾಂತ್ರಿಕ ದೋಷದಿಂದ ಸಂಭವಿಸಿದ ಸ್ಫೋಟವೇ ಎಂಬ ಬಗ್ಗೆ ಸಮಗ್ರ ತನಿಖೆ ಕೈಗೊಂಡಿದ್ದಾರೆ.