S Shorts

ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋದ 16 ವರ್ಷದ ವಿದ್ಯಾರ್ಥಿ ನೀರುಪಾಲು: 6 ಗಂಟೆಗಳ ಕಾರ್ಯಾಚರಣೆ ಬಳಿಕ ಶ*ವ ಪತ್ತೆ!

ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋದ 16 ವರ್ಷದ ವಿದ್ಯಾರ್ಥಿ ನೀರುಪಾಲು: 6 ಗಂಟೆಗಳ ಕಾರ್ಯಾಚರಣೆ ಬಳಿಕ ಶ*ವ ಪತ್ತೆ!
Author: Sagaradventure
Posted By: Sagaradventure
Updated: Jul 29, 2026 | 11:11 AM

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ತೊಳಲಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾಗಿರುವ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃ*ತ ದುರ್ದೈವಿಯನ್ನು ಕಾಚೇನಹಳ್ಳಿ ಗ್ರಾಮದ ನಿವಾಸಿ ಗೌತಮ್ (16) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಕಾಲೇಜು ಮುಗಿದ ಬಳಿಕ ಗೌತಮ್ ತನ್ನ ಸ್ನೇಹಿತರ ಜೊತೆ ಸೇರಿ ತೊಳಲಿ ಗ್ರಾಮದ ಬಳಿಯಿರುವ ಬಾವಿಯಲ್ಲಿ ಮೋಜು ಮಾಡಲು ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದರು. ತಡರಾತ್ರಿಯವರೆಗೂ ಸತತ 6 ಗಂಟೆಗಳ ಕಾಲ ನಡೆದ ಸುದೀರ್ಘ ಹಾಗೂ ಸವಾಲಿನ ಕಾರ್ಯಾಚರಣೆಯ ಬಳಿಕ ಕೊನೆಗೂ ವಿದ್ಯಾರ್ಥಿಯ ಮೃ*ತದೇಹವನ್ನು ಪತ್ತೆಹಚ್ಚುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಾವಿಯಿಂದ ಶ*ವವನ್ನು ಮೇಲಕ್ಕೆತ್ತಿದ ಬಳಿಕ, ಮರಣೋತ್ತರ ಪರೀಕ್ಷೆಗಾಗಿ ನಾಗಮಂಗಲ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಯೌವನದ ಹೊಸ್ತಿಲಲ್ಲಿದ್ದ ಮುದ್ದು ಮಗನನ್ನು ಅಕಾಲಿಕವಾಗಿ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶ*ವ ಪತ್ತೆಯಾದ ಸ್ಥಳದಲ್ಲಿ ಪೋಷಕರು ಹಾಗೂ ಸಂಬಂಧಿಕರ ಮನಕಲುಕುವ ರೋಧನೆ ನೆರೆದವರ ಕಣ್ಣಂಚಲ್ಲಿ ನೀರು ತರಿಸುವಂತಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.