ರಾಜಧಾನಿ ಬೆಂಗಳೂರಿನ ಜೀವನಾಡಿ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಮತ್ತೊಂದು ಬಿಗ್ ಶಾಕ್ ನೀಡಲು ಸಜ್ಜಾಗಿದೆ. ಮೆಟ್ರೋ ಕಾರ್ಯಾಚರಣೆಯ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಮೇಲೆ ಮತ್ತೆ ಬರೆ ಎಳೆಯಲು ಮೆಟ್ರೋ ನಿಗಮ ಮುಂದಾಗಿದ್ದು, ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 14ರಷ್ಟು ಪ್ರಯಾಣ ದರವನ್ನು ಹೆಚ್ಚಳ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಳೆದ ವರ್ಷವಷ್ಟೇ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ದ ನಿಗಮ, ಇದೀಗ ಮತ್ತೆ ದರ ಹೆಚ್ಚಳದ ಪ್ರಸ್ತಾಪ ಇಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ವಾರ್ಷಿಕ ಏರಿಕೆ ಕೈಬಿಟ್ಟು ಮೂರು ವರ್ಷದ ಲೆಕ್ಕಾಚಾರ
ಈ ಮೊದಲು ಪ್ರತಿ ವರ್ಷ ಶೇ. 5ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿತ್ತು. ಆದರೆ, ನಿಗಮದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಆ ಪ್ರಸ್ತಾಪವನ್ನು ಕೈಬಿಡಲಾಗಿತ್ತು. ಇದೀಗ ವಾರ್ಷಿಕ ಏರಿಕೆಯ ಬದಲು, ಪ್ರತಿ ಮೂರು ವರ್ಷಕ್ಕೊಮ್ಮೆ ಒಟ್ಟಾರೆಯಾಗಿ ಶೇ. 14ರಷ್ಟು ಟಿಕೆಟ್ ದರವನ್ನು ಹೆಚ್ಚಳ ಮಾಡುವ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ಸಿಗುತ್ತಾ?
ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಬಿಎಂಆರ್‌ಸಿಎಲ್ ತಂಡದ ಈ ದರ ಹೆಚ್ಚಳದ ಪ್ರಸ್ತಾವನೆ ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಂಗಳದಲ್ಲಿದೆ. ದಿನನಿತ್ಯ ಲಕ್ಷಾಂತರ ಜನರು ಮೆಟ್ರೋವನ್ನು ಅವಲಂಬಿಸಿದ್ದು, ಈ ಪ್ರಸ್ತಾವನೆಗೆ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡುತ್ತವಾ ಅಥವಾ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತಾವನೆಯನ್ನು ತಿರಸ್ಕರಿಸುತ್ತವಾ ಎಂಬುದನ್ನು ಕಾದು ನೋಡಬೇಕಿದೆ.
