S Shorts

Oil Crisis Alert | ಇರಾನ್‌ನಿಂದ ಹೊರ್ಮುಜ್ ಜಲಸಂಧಿ ಬಂದ್: ಭಾರತದಲ್ಲಿ ತೈಲ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್!

Oil Crisis Alert | ಇರಾನ್‌ನಿಂದ ಹೊರ್ಮುಜ್ ಜಲಸಂಧಿ ಬಂದ್: ಭಾರತದಲ್ಲಿ ತೈಲ ಕೊರತೆ ನೀಗಿಸಲು ಮಾಸ್ಟರ್ ಪ್ಲಾನ್!
Author: Meghana Gowda
Posted By: Meghana Gowda
Updated: Mar 4, 2026 | 9:32 AM

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯಿಂದಾಗಿ ಇರಾನ್ ‘ಹೊರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿರುವುದು ಭಾರತದ ಇಂಧನ ಭದ್ರತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಪೆಟ್ರೋಲಿಯಂ ಇಲಾಖೆ, ಕಳೆದ 48 ಗಂಟೆಗಳಿಂದ ತೈಲ ಕಂಪನಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ.

ಪರ್ಯಾಯ ಮಾರ್ಗ ಮತ್ತು ಸವಾಲುಗಳು:

ಹೊರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ದಕ್ಷಿಣ ಆಫ್ರಿಕಾದ ‘ಕೇಪ್ ಆಫ್ ಗುಡ್ ಹೋಪ್’ (Cape of Good Hope) ಮಾರ್ಗದ ಮೂಲಕ ತೈಲ ಸಾಗಾಟ ನಡೆಸಲು ಚರ್ಚೆಗಳು ನಡೆಯುತ್ತಿವೆ. ಹೊಸ ಮಾರ್ಗದಲ್ಲಿ ತೈಲ ಸಾಗಾಟ ಮಾಡುವುದರಿಂದ ಸಾಗಣೆ ವೆಚ್ಚ ಮತ್ತು ಸಮಯ ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಈ ಮಾರ್ಗದಲ್ಲಿ ಹಡಗುಗಳಿಗೆ ಹೆಚ್ಚಿನ ಇನ್ಸೂರೆನ್ಸ್ (ವಿಮೆ) ಹಣ ಪಾವತಿಸಬೇಕಾಗುತ್ತದೆ.

ಸದ್ಯ ಭಾರತಕ್ಕೆ ರಷ್ಯಾದಿಂದ ಬರುತ್ತಿದ್ದ ಕಚ್ಚಾ ತೈಲದ ಪ್ರಮಾಣ ಕಡಿಮೆಯಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಸ್ನೇಹಿ ರಾಷ್ಟ್ರ ರಷ್ಯಾದಿಂದಲೇ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಖರೀದಿ ಮಾಡುವ ಕುರಿತು ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ.

ಭಾರತದ ಇಂಧನ ಸಂಗ್ರಹ ಎಷ್ಟು? (Stock Status):

ಭಾರತವು ತುರ್ತು ಪರಿಸ್ಥಿತಿಗಾಗಿ ತನ್ನ ಕಾರ್ಯತಂತ್ರದ ತೈಲ ಸಂಗ್ರಹಾಗಾರಗಳಲ್ಲಿ (Strategic Petroleum Reserves) ಸಾಕಷ್ಟು ತೈಲವನ್ನು ಕಾಯ್ದಿರಿಸಿದೆ.

ಕಚ್ಚಾ ತೈಲ: ದೇಶದಲ್ಲಿ ಸದ್ಯ 50 ದಿನಗಳಿಗಾಗುವಷ್ಟು ಕಚ್ಚಾ ತೈಲದ ಸಂಗ್ರಹವಿದೆ.

ಎಲ್‌ಪಿಜಿ (LPG): ಅಡುಗೆ ಅನಿಲದ ಸಂಗ್ರಹವು ಸುಮಾರು 25 ರಿಂದ 30 ದಿನಗಳವರೆಗೆ ಸಾಕಾಗುವಷ್ಟಿದೆ.