ಬೆಂಗಳೂರು: ದಾವಣಗೆರೆ ಮೂಲದ ಮತ್ತು ನಗರದಲ್ಲಿ ಎಂಬಿಎ (MBA student) ವ್ಯಾಸಂಗ ಮಾಡುತ್ತಿದ್ದ ೨೫ ವರ್ಷದ ಯುವತಿ ಸುಪ್ರಿಯಾ (Supriya) ಅವರ ಅನುಮಾನಾಸ್ಪದ ಸಾವು ಹಲವು ರಹಸ್ಯಗಳ ಮುಖವಾಡವನ್ನು ಬಯಲು ಮಾಡಿದೆ. ಸುಬ್ರಹ್ಮಣ್ಯ ನಗರದ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಈ ಪ್ರಕರಣ, ಯುವತಿಯ ಸಾವಿನ ಕಾರಣಗಳ ಬಗ್ಗೆ ಅನುಮಾನ ಹುಟ್ಟಿಸಿದೆ.
ಗಾಯತ್ರಿ ನಗರದ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿರುವ ಬಾಡಿಗೆ ಮನೆಯ ಮೂರನೇ ಮಹಡಿಯಲ್ಲಿ ಸುಪ್ರಿಯಾ (೨೫) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎರಡು ದಿನಗಳಿಂದ ಬಾಗಿಲು ಒಳಭಾಗದಿಂದ ಲಾಕ್ ಆಗಿದ್ದ ಬಗ್ಗೆ ಮನೆ ಮಾಲೀಕರಿಗೆ ಅನುಮಾನ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಎಂಬಿಎ ಓದುತ್ತಿದ್ದ ಸುಪ್ರಿಯಾ (Supriya) , ಕುಟುಂಬಸ್ಥರು ಬೆಂಗಳೂರಿನಲ್ಲೇ ಇದ್ದರೂ ಸಹ ಸಪರೇಟ್ ಆಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರು ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ . ಸಾವಿಗೂ ಮುನ್ನ ಎರಡು ದಿನಗಳಿಂದ ಸುಪ್ರಿಯಾ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಕುಟುಂಬಸ್ಥರು ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಎಂಬಿಎ ಡಿಸ್ಕಂಟಿನ್ಯೂ ಮಾಡಿದ್ದ ಸುಪ್ರಿಯಾ(Supriya) , ಜೊತೆಗೆ ಬೈಕ್ ರೈಡಿಂಗ್ (Bike Riding)ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಓದು ಬಿಟ್ಟಿರುವುದು ಹಾಗೂ ಬೈಕ್ ರೈಡಿಂಗ್‌ನಂತಹ ಹಲವು ವಿಚಾರಗಳನ್ನು ಕುಟುಂಬಸ್ಥರಿಗೆ ಮುಚ್ಚಿಟ್ಟಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಕುಟುಂಬಸ್ಥರು ದೂರು ನೀಡದ ಕಾರಣ ಪೊಲೀಸರೇ ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. ಆದರೆ, ಕೆಲವು ವರದಿಗಳ ಪ್ರಕಾರ, ನಂತರ ಕುಟುಂಬಸ್ಥರ ದೂರಿನ ಆಧಾರದ ಮೇಲೆ ಯುಡಿಆರ್ ಕೇಸ್ ದಾಖಲಿಸಲಾಗಿದೆ.
ಸ್ಥಳದಲ್ಲಿ ಯಾವುದೇ ಡೆತ್ ನೋಟ್ (ಆತ್ಮಹತ್ಯೆ ಪತ್ರ) ಪತ್ತೆಯಾಗಿಲ್ಲ. ಹೀಗಾಗಿ, ಪೊಲೀಸರು ಸುಪ್ರಿಯಾ ಅವರ ಐಫೋನ್ ಅನ್ನು ವಶಪಡಿಸಿಕೊಂಡು, ಡೇಟಾ ರಿಟ್ರೈವಲ್‌ಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದಾರೆ. ಅಂತಿಮ ಮರಣೋತ್ತರ ಪರೀಕ್ಷಾ ವರದಿ ಮತ್ತು ಮೊಬೈಲ್ ಡೇಟಾದಿಂದ ಸಾವಿಗೆ ನಿಖರ ಕಾರಣ ತಿಳಿದುಬರುವ ನಿರೀಕ್ಷೆ ಇದೆ.
