S Shorts

ಕೇವಲ 11,000 ಸಂಬಳ, 5 ಮನೆಗಳ ಒಡೆಯ! PNBಯಲ್ಲಿ 17 ಕೋಟಿ ನಕಲಿ ನೋಟು ಪತ್ತೆ ಪ್ರಕರಣದ ಕೇಂದ್ರಬಿಂದು ಗುತ್ತಿಗೆ ಕಾರ್ಮಿಕ

ಕೇವಲ 11,000 ಸಂಬಳ, 5 ಮನೆಗಳ ಒಡೆಯ! PNBಯಲ್ಲಿ 17 ಕೋಟಿ ನಕಲಿ ನೋಟು ಪತ್ತೆ ಪ್ರಕರಣದ ಕೇಂದ್ರಬಿಂದು ಗುತ್ತಿಗೆ ಕಾರ್ಮಿಕ
Author: Sagaradventure
Posted By: Sagaradventure
Updated: Sep 12, 2026 | 10:33 AM

ಸಹಾರನ್‌ಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಕರೆನ್ಸಿ ಚೆಸ್ಟ್‌ನಲ್ಲಿ ಬರೋಬ್ಬರಿ 17.29 ಕೋಟಿ ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾದ ಬೃಹತ್ ಹಗರಣವು ಇದೀಗ ರೋಚಕ ತಿರುವು ಪಡೆದುಕೊಂಡಿದೆ. ತಿಂಗಳಿಗೆ ಕೇವಲ 11,000 ರೂ. ಸಂಬಳ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕನೊಬ್ಬ ಈ ಪ್ರಕರಣದ ಪ್ರಮುಖ ಶಂಕಿತನಾಗಿ ಹೊರಹೊಮ್ಮಿದ್ದಾನೆ. ಆತನ ಆದಾಯಕ್ಕೂ, ಜೀವನಶೈಲಿಗೂ ಇರುವ ಅಗಾಧ ವ್ಯತ್ಯಾಸ ಕಂಡು ತನಿಖಾಧಿಕಾರಿಗಳೇ ದಂಗಾಗಿದ್ದಾರೆ.

ಈ ಪ್ರಕರಣದ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಪೊಲೀಸ್ ಅಧಿಕಾರಿಗಳು, ಕಾರ್ಮಿಕನ ಆಸ್ತಿಪಾಸ್ತಿಗಳು, ಆರ್ಥಿಕ ವಹಿವಾಟುಗಳು ಹಾಗೂ ಈಗಾಗಲೇ ಅಮಾನತುಗೊಂಡಿರುವ ಬ್ಯಾಂಕ್ ಮ್ಯಾನೇಜರ್ ಜೊತೆಗಿನ ಆತನ ನಿಕಟ ಸಂಪರ್ಕದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಬೆಚ್ಚಿಬೀಳಿಸುವ ಆಸ್ತಿಯ ವಿವರ! 

ಕರೆನ್ಸಿ ಚೆಸ್ಟ್‌ನಲ್ಲಿ ಕೇವಲ ಡ್ರೈವರ್ ಹಾಗೂ ಲೋಡರ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಈತನ ಬಳಿ ಭಾರಿ ಪ್ರಮಾಣದ ಆಸ್ತಿ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಬರೋಬ್ಬರಿ 5 ಮನೆಗಳು, ಒಂದು ದುಬಾರಿ ಎಸ್‌ಯುವಿ (SUV) ಮತ್ತು ಒಂದು ಸೆಡಾನ್ ಕಾರು, 2 ಮೋಟಾರ್ ಸೈಕಲ್‌ಗಳು, ಆಶ್ಚರ್ಯಕರ ಸಂಗತಿಯೆಂದರೆ 11 ಸಾವಿರ ರೂ. ಸಂಬಳ ಪಡೆಯುವ ಈತ, ತಾನೇ ವಾಹನ ಚಲಾಯಿಸುವ ಬದಲು ದಿನಕ್ಕೆ 500 ರೂ. ನೀಡಿ ಬೇರೊಬ್ಬ ಡ್ರೈವರ್ ಅನ್ನು ನೇಮಿಸಿಕೊಂಡಿದ್ದ!

ಈ ಬೃಹತ್ ಆಸ್ತಿಗಳನ್ನು ಯಾವಾಗ ಖರೀದಿಸಲಾಯಿತು, ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಹಾಗೂ ಹಣದ ಮೂಲ ಯಾವುದು ಎಂಬುದರ ಕುರಿತು ಎನ್‌ಐಎ ದಾಖಲೆಗಳನ್ನು ಜಾಲಾಡುತ್ತಿದೆ. ಬುಧವಾರ ಮಾಣಕ್ ಮೌ (Manakmau) ದಲ್ಲಿರುವ ಆತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮ್ಯಾನೇಜರ್ ಜೊತೆ ನಿಕಟ ಸಂಪರ್ಕ 

ಕಾರ್ಮಿಕನ ಆಸ್ತಿಗೂ ಮತ್ತು ಪತ್ತೆಯಾಗಿರುವ ನಕಲಿ ಕರೆನ್ಸಿಗೂ ನೇರ ಸಂಬಂಧವಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಇನ್ನೂ ಸ್ಪಷ್ಟ ಆಧಾರಗಳು ಸಿಕ್ಕಿಲ್ಲ. ಆದರೆ, ಅಮಾನತುಗೊಂಡಿರುವ ಬ್ಯಾಂಕ್ ಮ್ಯಾನೇಜರ್ ಅಮಿತ್ ಕುಮಾರ್ ಜೊತೆ ಈತ ಹೊಂದಿದ್ದ ನಿಕಟ ಸಂಪರ್ಕ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಧಿಕೃತವಾಗಿ ಈತನ ಕೆಲಸ ಕೇವಲ ವಾಹನ ಚಾಲನೆ ಮತ್ತು ನಗದು ಲೋಡಿಂಗ್ ಆಗಿದ್ದರೂ, ಈತ ಮ್ಯಾನೇಜರ್‌ನ ಆಪ್ತ ಸಹಾಯಕನಂತೆ (PA) ಕಾರ್ಯನಿರ್ವಹಿಸುತ್ತಿದ್ದ. ಆರ್‌ಬಿಐ (RBI) ಪರವಾಗಿ ಬ್ಯಾಂಕ್‌ಗಳು ನಗದು ಸಂಗ್ರಹಿಸಿಡುವ ಅತ್ಯಂತ ಭದ್ರತೆಯ ‘ಕರೆನ್ಸಿ ಚೆಸ್ಟ್’ ಬಳಿಯೇ ಈತ ಹೆಚ್ಚಿನ ಸಮಯ ಕಳೆಯುತ್ತಿದ್ದ. ನಗದು ನಿರ್ವಹಣಾ ವಿಭಾಗಗಳಿಗೆ ಈತನಿಗೆ ಮುಕ್ತ ಪ್ರವೇಶವಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕರೆನ್ಸಿ ಚೆಸ್ಟ್‌ಗೆ ಅಸಲಿ ನೋಟುಗಳ ಬದಲಿಗೆ ನಕಲಿ ನೋಟುಗಳನ್ನು ತಂದಿಡಲಾಗಿದೆಯೇ? ಹಾಗಿದ್ದಲ್ಲಿ ಅಸಲಿ ನಗದು ಏನಾಯಿತು? ಈ ಜಾಲದ ಹಿಂದೆ ಯಾವುದಾದರೂ ವಿದೇಶಿ ಸಂಪರ್ಕವಿದೆಯೇ? ಎಂಬೆಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA) ತನಿಖೆಯನ್ನು ಚುರುಕುಗೊಳಿಸಿದೆ.