ಬೆಂಗಳೂರು: ಆನೇಕಲ್ ಉಪ ವಿಭಾಗದ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ನೆರಳೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಾಣಿಗಳಿಗೆ ಮೇವು ಸಾಗಾಟ ಮಾಡುವ ರೀತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 22 ಕೆಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒರಿಸ್ಸಾ ಮೂಲದ ಋಷಿಕೇಶ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖದೀಮನ ಖತರ್ನಾಕ್ ಪ್ಲಾನ್ ಬಯಲು
ಯುವಜನತೆಯನ್ನು ಮಾದಕ ದ್ರವ್ಯ ವ್ಯಸನಕ್ಕೆ ಸೆಳೆಯುವ ದೊಡ್ಡ ಜಾಲ ಇದರ ಹಿಂದಿರುವ ಶಂಕೆ ವ್ಯಕ್ತವಾಗಿದೆ. ಬಂಧಿತ ಆರೋಪಿ ಋಷಿಕೇಶ್ ಮೂಲತಃ ಒರಿಸ್ಸಾದವನಾಗಿದ್ದು, ಪ್ರಸ್ತುತ ಚಂದಾಪುರದಲ್ಲಿ ವಾಸವಾಗಿದ್ದನು. ಪೊಲೀಸರ ಕಣ್ತಪ್ಪಿಸಲು ಆತ ಗೋಣೀಚೀಲಗಳಲ್ಲಿ ಪ್ರಾಣಿಗಳ ಮೇವು ತುಂಬಿರುವಂತೆ ಬಿಂಬಿಸಿ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಅದರೊಳಗೆ ಗಾಂಜಾವನ್ನು ಅಡಗಿಸಿಟ್ಟು ಕದ್ದೊಯ್ಯುತ್ತಿದ್ದನು.
ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಈ ಅಕ್ರಮ ದಂಧೆ ನಡೆಸುತ್ತಿದ್ದ ಆರೋಪಿ, ನೆರಳೂರು ನಿರ್ಜನ ಪ್ರದೇಶದಲ್ಲಿ ಗಾಂಜಾ ಸಂಗ್ರಹಿಸಿ, ಬಳಿಕ ಅಲ್ಲಿಂದ ಬೇರೆ ಬೇರೆ ಪ್ರದೇಶಗಳಿಗೆ ಹಂಚಿಕೆ ಮಾಡಲು ಸಂಚು ರೂಪಿಸಿದ್ದನು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಯಶಸ್ವಿ ಪೊಲೀಸ್ ಕಾರ್ಯಾಚರಣೆ
ಗಾಂಜಾ ಸಾಗಾಟದ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅತ್ತಿಬೆಲೆ ಪೊಲೀಸರು, ಆರೋಪಿಯ ತಂತ್ರವನ್ನು ವಿಫಲಗೊಳಿಸಿ ಅಪಾರ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಅತ್ತಿಬೆಲೆ ಇನ್ಸ್‌ಪೆಕ್ಟರ್ ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹಾಗೂ ಕ್ರೈಮ್ ವಿಭಾಗದ ಸಿಬ್ಬಂದಿಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಲದಲ್ಲಿರುವ ಇತರರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
