S Shorts

ನೈಜ ಸಾಹಸ ದೃಶ್ಯಗಳ ‘ರಿಯಲ್ ಫೈಟರ್ಸ್’ ಅದ್ದೂರಿ ಟೀಸರ್ ಬಿಡುಗಡೆ: ಅಖಾಡಕ್ಕಿಳಿದ ವಿದ್ಯಾರ್ಥಿ ಕಲಾವಿದರು!

ನೈಜ ಸಾಹಸ ದೃಶ್ಯಗಳ ‘ರಿಯಲ್ ಫೈಟರ್ಸ್’ ಅದ್ದೂರಿ ಟೀಸರ್ ಬಿಡುಗಡೆ: ಅಖಾಡಕ್ಕಿಳಿದ ವಿದ್ಯಾರ್ಥಿ ಕಲಾವಿದರು!
Author: Sagaradventure
Posted By: Sagaradventure
Updated: Nov 2, 2026 | 3:20 PM

ಬೆಂಗಳೂರು: ಚಾಮರಾಜ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಿಯಲ್ ಫೈಟರ್ಸ್’ ಚಿತ್ರದ ಅಧಿಕೃತ ಟೀಸರ್ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೈಜ ಸಾಹಸ ಹಾಗೂ ವಿದ್ಯಾರ್ಥಿ ಕಲಾವಿದರ ಶ್ರಮವನ್ನು ಹೊತ್ತು ತರುತ್ತಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಶಾಸಕ ಕೆ. ಗೋಪಾಲಯ್ಯ, ನಟ ‘ನೆನಪಿರಲಿ’ ಪ್ರೇಮ್, ಉದ್ಯಮಿ ಎಚ್.ಎಸ್. ರಾಘವೇಂದ್ರ ಶೆಟ್ರು ಹಾಗೂ ಖ್ಯಾತ ರಾಕ್ ಕ್ಲೈಂಬರ್ ಜ್ಯೋತಿರಾಜ್ (ಕೋತಿರಾಜ್) ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರೇಮ್, ನಿರ್ದೇಶಕ ಚಾಮರಾಜ್ ಅವರ ಕಾರ್ಯವನ್ನು ಶ್ಲಾಘಿಸಿದರು. “ಚಾಮರಾಜ್ ಮಾಸ್ಟರ್ ಲಕ್ಷಾಂತರ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಾನು ಮತ್ತು ನನ್ನ ಮಕ್ಕಳು ಕೂಡ ಅವರ ಶಿಷ್ಯಂದಿರು ಎಂದು ಹೇಳಿಕೊಳ್ಳಲು ಹೆಮ್ಮೆ ಹಾಗೂ ಪುಣ್ಯವೆನಿಸುತ್ತದೆ” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು. 

ಈ ಚಿತ್ರದ ಮತ್ತೊಂದು ಪ್ರಮುಖ ವಿಶೇಷತೆ ಎಂದರೆ, ಯಾವುದೇ ರೋಪ್‌ಗಳು ಅಥವಾ ಆಧುನಿಕ ರಕ್ಷಣಾ ಸಾಧನಗಳನ್ನು ಬಳಸದೆ ಕೇವಲ ನೈಜ ಕೌಶಲದಿಂದಲೇ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಅಪಾಯಕಾರಿ ದೃಶ್ಯಗಳಲ್ಲಿ ವಿದ್ಯಾರ್ಥಿ ಕಲಾವಿದರು ತೋರಿದ ಶ್ರದ್ಧೆ ಹಾಗೂ ಬದ್ಧತೆಯನ್ನು ಇಡೀ ತಂಡ ಕೊಂಡಾಡಿತು.

ಡಾ. ಚಾಮರಾಜ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಡಾ. ಎನ್. ಚಂದ್ರಶೇಖರ್, ಡಾ. ಎಸ್. ಮಂಜುನಾಥ್, ಜ್ಯೋತಿರಾಜ್, ಡಾ. ವಿ. ನಾಗೇಂದ್ರ ಪ್ರಸಾದ್, ಎಂ.ಎಸ್. ಜಹಂಗೀರ್, ಡ್ಯಾನಿ ಕುಟ್ಟಪ್ಪ, ಚೆಲುವರಾಜ್ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. 

ಅನಿಲ್‌, ಅರುಣ್‌ ರೋಹಿತ್‌, ರಾಕ್ ಶ್ರೀ, ನೇತ್ರಾ ಮತ್ತು ಶ್ರೀಹರ್ಷ ಚಿತ್ರದಲ್ಲಿ ರಿಯಲ್‌ ಸ್ಟಂಟ್‌ ಮಾಡಿದ್ದಾರೆ. ಚಿತ್ರಕ್ಕೆ ಸತೀಶ್ ಆರ್ಯನ್ ಸಂಗೀತ, ವಿಘ್ನೇಶ್ ಮಲೈಚಾಮಿ ಹಾಗೂ ಯುಜೀನ್ ಡಿಸೋಜಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಎನ್‌ಕೆಎಂ ಅಂಡ್ ಸನ್ಸ್, ಡಾ. ಎಸ್. ಮಂಜುನಾಥ್, ಗಗನ್ ಸತೀಶ್ ಮತ್ತು ವಕೀಲ ಜಗದೀಶ್ ಎಲ್. ಅವರು ಚಿತ್ರದ ನಿರ್ಮಾಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.