ಕೊಪ್ಪಳ: ಕೊಪ್ಪಳ (Koppal ) ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಧಾರವಾಡದಿಂದ (Dharwad) ಅಂಜನಾದ್ರಿಗೆ ಯಾತ್ರಾರ್ಥಿಗಳು ತೆರಳುತ್ತಿದ್ದ ಕ್ರೂಸರ್ ವಾಹನದಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ವಾಹನದ ಮುಂಭಾಗದ ಟೈರ್ ಏಕಾಏಕಿ ಸಿಡಿದಿದೆ. ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಲ್ಲೇ ಪಲ್ಟಿಯಾಗಿದೆ.
ಈ ದುರ್ಘಟನೆಯಲ್ಲಿ ಧಾರವಾಡ ಮೂಲದ ಅಮನ್ ಜೈನ್ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ತಕ್ಷಣವೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಾಹನದಲ್ಲಿದ್ದ ಇನ್ನುಳಿದ ಏಳು ಮಂದಿ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
