ಮುಂಬೈ: ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಪಾತಾಳಕ್ಕೆ ಕುಸಿದಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಬರೋಬ್ಬರಿ 69 ಪೈಸೆಗಳಷ್ಟು ಕುಸಿತ ಕಂಡು 92.18 ರೂ.ಗಳ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಏರಿಕೆಯಾಗಿರುವುದು ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.
ಇರಾನ್ ಬಿಕ್ಕಟ್ಟಿನ ಪರಿಣಾಮವಾಗಿ ಫ್ಯೂಚರ್ಸ್ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ (Brent Crude) ಬೆಲೆಯು ಪ್ರತಿ ಬ್ಯಾರೆಲ್‌ಗೆ 82 ಡಾಲರ್ (USD) ಗಡಿ ದಾಟಿದೆ. ಇದರಿಂದಾಗಿ ದೇಶೀಯ ಕರೆನ್ಸಿ ತೀವ್ರ ಒತ್ತಡಕ್ಕೆ ಸಿಲುಕಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು (Forex traders) ತಿಳಿಸಿದ್ದಾರೆ.
ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ 92.05 ರೂ.ಗಳೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ, ಬಳಿಕ 92.18 ರೂ.ಗಳಿಗೆ ಕುಸಿಯಿತು. ಸೋಮವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 91.49 ರೂ.ಗಳಲ್ಲಿ ಅಂತ್ಯಗೊಂಡಿತ್ತು. ಅಂದರೆ ಹಿಂದಿನ ಮುಕ್ತಾಯಕ್ಕಿಂತ 69 ಪೈಸೆಗಳಷ್ಟು ಭಾರಿ ಕುಸಿತ ದಾಖಲಿಸಿದೆ. ಹೋಳಿ ಹಬ್ಬದ ಪ್ರಯುಕ್ತ ಮಂಗಳವಾರ ವಿದೇಶಿ ವಿನಿಮಯ ಮಾರುಕಟ್ಟೆ ಬಂದ್ ಆಗಿತ್ತು.
