ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳಕ್ಕೆ ಬೇಸತ್ತು ಅಕ್ಷತಾ ಎಂಬ ಗೃಹಿಣಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೃತಳ ಪತಿ ಪುರುಷೋತ್ತಮ ಸೇರಿದಂತೆ ನಾಲ್ವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಅತ್ತೆಯಿಂದ ಹಲ್ಲೆ, ನಿರಂತರ ಕಿರುಕುಳ:
ಎಂಟು ವರ್ಷಗಳ ಹಿಂದೆ ಅಕ್ಷತಾ ಹಾಗೂ ಪುರುಷೋತ್ತಮ ಅವರ ವಿವಾಹವಾಗಿತ್ತು. ಮೃ*ತಳಿಗೆ ಪತಿ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಪತಿಯ ಎದುರೇ ಅತ್ತೆಯು ಅಕ್ಷತಾ ಅವರ ಮೇಲೆ ಪೊರಕೆಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ಅಕ್ಷತಾ ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ವರದಕ್ಷಿಣೆ ಪಿಡುಗಿಗೆ ಬಲಿಯಾದ ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃ*ತಳ ಪೋಷಕರು ಆಗ್ರಹಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
