ಬೆಂಗಳೂರು: ರಾಜ್ಯ ಸರ್ಕಾರದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ರೈತರ ಸಹಭಾಗಿತ್ವದಲ್ಲಿ ರಸ್ತೆಬದಿಯ ಸರ್ಕಾರಿ ಜಮೀನುಗಳಲ್ಲಿ ಮರ ಬೆಳೆಸಲು 450 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ‘ತೇಗ ಸಿರಿ’ ಯೋಜನೆಗೆ ಚಾಲನೆ ನೀಡಿದೆ. 2026-27 ರಿಂದ 2028-29 ರವರೆಗೆ ಜಾರಿಯಲ್ಲಿರುವ ಈ ಯೋಜನೆಗೆ ಅಕ್ಟೋಬರ್ 23 ರಂದು ಅಧಿಕೃತ ಆದೇಶ ಹೊರಡಿಸಲಾಗಿದ್ದು, ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ರೈತರಿಗೆ ಶೇ. 70ರಷ್ಟು ಲಾಭ ಹಾಗೂ ಹಕ್ಕುಪತ್ರ:
ರಸ್ತೆಬದಿಯಲ್ಲಿ ಜಮೀನು ಹೊಂದಿರುವ ರೈತರು ಈ ಯೋಜನೆಯ ಅರ್ಹ ಫಲಾನುಭವಿಗಳಾಗಿರುತ್ತಾರೆ. ವಿಬಿ ಜಿ-ರಾಮ್-ಜಿ (VB G-RAM-G) ಯೋಜನೆಯಡಿ ಕಾಮಗಾರಿ ನಡೆಯಲಿದ್ದು, ಬೆಳೆಸಿದ ಮರಗಳ ಉತ್ಪನ್ನ ಅಥವಾ ಲಾಭದಲ್ಲಿ ಶೇ. 70 ರಷ್ಟು ಪಾಲು ರೈತರಿಗೆ ದೊರೆಯಲಿದೆ. ಇದಕ್ಕಾಗಿ ರೈತರಿಗೆ ಭಾವಚಿತ್ರವಿರುವ ‘ಮರಪಟ್ಟಾ’ (Passbook) ಹಾಗೂ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಅರಣ್ಯ ಇಲಾಖೆಯೇ ತೇಗ, ಬೀಟೆ, ಹೊನ್ನೆ, ಮಹಾಗನಿ, ಹೆಬ್ಬೇವು, ಹಲಸು, ಮಾವು ಮುಂತಾದ ಸಸಿಗಳನ್ನು ಪೂರೈಸಲಿದೆ. ಆದರೆ ಹುಣಸೆ, ನೇರಳೆಯಂತಹ ನಿಧಾನವಾಗಿ ಬೆಳೆಯುವ ಮರಗಳನ್ನು ನೆಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಮಿತಿಗಳ ರಚನೆ ಹಾಗೂ ವಿಶೇಷ ಸೂಚನೆ:
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಜಿಲ್ಲಾ ಮಟ್ಟದ ಸಮಿತಿಯು ರಸ್ತೆ ಸುರಕ್ಷತೆ ಮತ್ತು ಜಮೀನು ಲಭ್ಯತೆ ಆಧರಿಸಿ ಮರ ಬೆಳೆಸುವ ಜಾಗವನ್ನು ಅಂತಿಮಗೊಳಿಸಲಿದೆ. ತಾಲೂಕು ಮಟ್ಟದಲ್ಲಿ ಇಒ (EO) ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒ (PDO) ನೇತೃತ್ವದ ಸಮಿತಿಗಳು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ, ಮೇಲ್ವಿಚಾರಣೆ ನಡೆಸಲಿವೆ.
ಕಲಬುರಗಿ, ವಿಜಯಪುರ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳ ನೀರಾವರಿ ಪ್ರದೇಶಗಳಲ್ಲಿ ಮಾತ್ರ ತೇಗ ಬೆಳೆಸಲು ಹಾಗೂ ಇತರೆಡೆ ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ಆರ್ಥಿಕ ಮೌಲ್ಯದ ಮರಗಳನ್ನು ಬೆಳೆಸಲು ನಿರ್ದೇಶಿಸಲಾಗಿದೆ. ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸುವಂತೆ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
