S Shorts

ಸ್ಟಿಂಗ್ ವಿಡಿಯೋ ಕೇಸ್: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ ರಿತೇಶ್!

ಸ್ಟಿಂಗ್ ವಿಡಿಯೋ ಕೇಸ್: ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ ರಿತೇಶ್!
Author: Sagaradventure
Posted By: Sagaradventure
Updated: Oct 24, 2026 | 7:09 PM

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತ ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಕರ್ನಾಟಕ ಹನಿಟ್ರ್ಯಾಪ್’ (Karnataka Honeytrap) ಯೂಟ್ಯೂಬ್ ಖಾತೆ ಮೂಲಕ ವಿಡಿಯೋ ಅಪ್‌ಲೋಡ್ ಮಾಡಿದ್ದ ದೆಹಲಿ ಮೂಲದ ರಿತೇಶ್ ಪಾಂಡೆ ಕುರಿತು ಸಿಸಿಬಿ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಈ ಕೃತ್ಯ ಎಸಗಲೆಂದೇ ಆತ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ 15,000 ರೂ. ನೀಡಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ ಎಂಬುದು ಸಾಕ್ಷ್ಯಸಮೇತ ದೃಢಪಟ್ಟಿದೆ.

ವೈ-ಫೈ ಬಳಸಿ ವಿಡಿಯೋ ಅಪ್‌ಲೋಡ್, ಸೂತ್ರಧಾರನಿಗೆ ಶೋಧ: 

ಮೊಬೈಲ್ ಖರೀದಿಸಿದ ಬಳಿಕ ರಿತೇಶ್ ಸಿಮ್ ಕಾರ್ಡ್ ಬಳಸದೆ ಕೇವಲ ವೈ-ಫೈ (Wi-Fi) ಮೂಲಕ ಇಂಟರ್ನೆಟ್ ಸಂಪರ್ಕ ಕಲ್ಪಿಸಿದ್ದ. ತನಗೆ ಮೊದಲೇ ತಲುಪಿದ್ದ ಪೆನ್‌ಡ್ರೈವ್ ಅನ್ನು ಒಟಿಜಿ (OTG) ಕನೆಕ್ಟರ್ ಮೂಲಕ ಮೊಬೈಲ್‌ಗೆ ಜೋಡಿಸಿ, ಯೂಟ್ಯೂಬ್ ಖಾತೆ ತೆರೆದು ವಿಡಿಯೋ ಅಪ್‌ಲೋಡ್ ಮಾಡಿದ್ದ. ಈ ಕುರಿತು ಮೊಬೈಲ್ ಅಂಗಡಿಯ ಬಿಲ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿಡಿಯೋ ಅಪ್‌ಲೋಡ್ ಮಾಡಲು ಆತನಿಗೆ 50 ಸಾವಿರ ರೂ. ನೀಡಲಾಗಿದೆ ಎಂಬ ಶಂಕೆ ಇದ್ದು, ಪೆನ್‌ಡ್ರೈವ್ ಕೊಟ್ಟವರು ಯಾರು ಹಾಗೂ ಇದರ ಹಿಂದಿರುವ ಅಸಲಿ ಸೂತ್ರಧಾರ ಯಾರು ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಮತ್ತೊಂದೆಡೆ, ವಿಡಿಯೋದಲ್ಲಿರುವ ಮಹಿಳೆಯ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಆರೋಪಿಗೆ ಷರತ್ತುಬದ್ಧ ಜಾಮೀನು: 

ಬಂಧಿತ ರಿತೇಶ್ ಪಾಂಡೆಯನ್ನು 66ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ಸೆಕ್ಷನ್‌ಗಳ ಅಡಿಯಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಲು ಅವಕಾಶವಿರುವ ಕಾರಣ ಹಾಗೂ ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಕ್ಕಿರುವ ಅಂಶವನ್ನು ಪರಿಗಣಿಸಿ, ನ್ಯಾಯಾಲಯವು ರಿತೇಶ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಂಪೂರ್ಣ ಸಹಕರಿಸಬೇಕು, ನಗರ ಬಿಟ್ಟು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.